
ಬೆಂಗಳೂರು: ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತಿತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ. 75 ರಷ್ಟು ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಟಿವಿ ಮೋಹನ್ ದಾಸ್ ಪೈ ವಾಗ್ದಾಳಿ ನಡೆಸಿದ್ದು, ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಬದಲು ಉದ್ಯೋಗ ಪಡೆಯಲು ಕೌಶಲ್ಯ ಬೆಳೆಸುವುದೊಂದೇ ದಾರಿ ಎಂದಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕನ್ನಡಿಗರಿಗೆ ಉದ್ಯೋಗಕ್ಕಾಗಿ ಬಯಸಿದರೆ, ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಖರ್ಚು ಮಾಡಿ. ಅವರಿಗೆ ತರಬೇತಿ ನೀಡಿ. ಕೌಶಲ್ಯ ಅಭಿವೃದ್ಧಿ, ಇಂಟರ್ನ್‌ಶಿಪ್, ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಿ. ಅದರಿಂದ ಅವರೆಲ್ಲರೂ ಕೌಶಲ್ಯಪೂರ್ಣರಾಗುತ್ತಾರೆ. ಇದರಿಂದ ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ವಿಧೇಯಕ"ಫ್ಯಾಸಿಸ್ಟ್" ಮತ್ತು ಅಸಂವಿಧಾನಿಕವಾಗಿದೆ ಎಂದು ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದರು.
ಇದಕ್ಕೂ ಮುನ್ನಾ ಟ್ವೀಟ್ ಮಾಡಿದ್ದ ಮೋಹನ್ ದಾಸ್ ಪೈ, ಇದು ತಾರತಮ್ಯ, ಪ್ರತಿಗಾಮಿ ಮತ್ತು ಸಂವಿಧಾನ ವಿರೋಧಿಯಾಗಿದೆ. ಕಾಂಗ್ರೆಸ್ ಸರ್ಕಾರ ಈ ರೀತಿಯ ಮಸೂದೆಯನ್ನು ತರಬಹುದು ಎಂದು ನಂಬಲು ಸಾಧ್ಯವಿಲ್ಲ. ಖಾಸಗಿ ವಲಯದ ನೇಮಕಾತಿ ಸಮಿತಿಗಳಲ್ಲಿ ಸರ್ಕಾರಿ ಅಧಿಕಾರಿ ಕುಳಿತುಕೊಳ್ಳುತ್ತಾರೆಯೇ? ಕಾಂಗ್ರೆಸ್ ಹಾಗೂ ಜೈರಾಮ್ ರಮೇಶ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.
ಈ ಮಧ್ಯೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮಸೂದೆಯ ನಿಯಮಗಳನ್ನು ರೂಪಿಸುವ ಮೊದಲು ವ್ಯಾಪಕ ಸಮಾಲೋಚನೆ ನಡೆಸಲಾಗುವುದು ಎಂದು ಹೇಳುವ ಮೂಲಕ ಕೈಗಾರಿಕೋದ್ಯಮಿಗಳ ಆತಂಕವನ್ನು ನಿವಾರಿಸಿದ್ದಾರೆ.
"ಕಾರ್ಮಿಕ ಇಲಾಖೆಯಿಂದ ಮಸೂದೆಯನ್ನು ತರಲಾಗಿದೆ. ಅವರು ಇನ್ನೂ ಉದ್ಯಮ, ಕೈಗಾರಿಕಾ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಸಮಾಲೋಚಿಸಬೇಕಾಗಿದೆ. ಮಸೂದೆಯ ನಿಯಮಗಳನ್ನು ಮಂಡಿಸುವ ಮೊದಲು ಸಂಬಂಧಿತ ಸಚಿವರು ಮುಖ್ಯವಾಗಿ ಉದ್ಯಮದೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಲಿದ್ದಾರೆ. ಆದ್ದರಿಂದ ಆತಂಕಗೊಳ್ಳುವ ಅಗತ್ಯವಿಲ್ಲ. ಆದ್ದರಿಂದ ಕನ್ನಡಿಗರಿಗೆ ಉದ್ಯೋಗಕ್ಕೆ ಪ್ರೋತ್ಸಾಹ ಜೊತೆಗೆ ಉದ್ಯಮಗಳೊಂದಿಗೆ ಸಮಾಲೋಚನೆಯೊಂದಿಗೆ ಹೂಡಿಕೆಯನ್ನು ಪ್ರೋತ್ಸಾಹಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿ ಗೊಂದಲವನ್ನು ನಿವಾರಿಸಲಾಗುವುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
Advertisement