
ರಾಯ್‌ಪುರ: ರಾಯಪುರ ನಗರದ ಅನುಪಮ್ ನಗರದಲ್ಲಿರುವ ಮಸೀದಿ ಎದುರು ಕಳೆದ ಶುಕ್ರವಾರ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಟೋ ರಿಕ್ಷಾ ಚಾಲಕ ಸಲ್ಮಾನ್ ಖಾನ್ ಕೆಲವು ಸಾಮಾಗ್ರಿಗಳನ್ನು ತಲುಪಿಸಲು ಡಾ. ಸಂಧ್ಯಾ ರಾವ್ ಅವರ ಮನೆ ಬಳಿ ಹೋಗಿದ್ದಾಗ ಪಿಟ್‌ಬುಲ್ ನಾಯಿಗಳು ಆತನ ಮೇಲೆ ದಾಳಿ ಮಾಡಿವೆ.
ಒಂದು ನಾಯಿ ಆತನನ್ನು ಮೊಣಕಾಲಿನ ಬಳಿ ಕಚ್ಚಿದ್ದರೆ. ಮತ್ತೊಂದು ನಾಯಿ ಕೈಯನ್ನು ಕಚ್ಚಿತ್ತು. ತೀವ್ರ ನೋವಿನಲ್ಲಿ ರಕ್ತ ಸೋರುತ್ತಿದ್ದರೂ ನಾಯಿಗಳಿಂದ ತಪ್ಪಿಸಿಕೊಳ್ಳಲು ಮನೆ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಾನೆಟ್ ಮೇಲೆ ಹತ್ತಿದ್ದಾನೆ. ಅಕ್ಕಪಕ್ಕದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ನಂತರ, ಯುವಕ ದೂರು ನೀಡಲು ಖಮ್ಹರ್ದಿಹ್ ಪೊಲೀಸ್ ಠಾಣೆಗೆ ಬಂದಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯು ಪಿಟ್‌ಬುಲ್ ನಾಯಿಗಳ ಮಾಲೀಕ ಡಾ.ಅಕ್ಷಯ್ ರಾವ್ ವಿರುದ್ಧ ಅಪಾಯಕಾರಿ ನಾಯಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯಕ್ಕಾಗಿ ಪ್ರಕರಣ ದಾಖಲಿಸಿದೆ.
ನಾಯಿಗಳು ಡೆಲಿವರಿ ಬಾಯ್ ನನ್ನು ಕಚ್ಚುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋದಲ್ಲಿ ಮಹಿಳೆಯೊಬ್ಬರು ನಿನಗೆ ಬುದ್ದಿ ಇಲ್ವಾ. ಮನೆಯಲ್ಲಿ ನಾಯಿ ಇರಬೇಕಾದರೆ ಒಳಗೆ ಬಂದಿದ್ದೀಯಾ ಎಂದು ಬೈದ್ದಿದ್ದಾರೆ. ಮಹಿಳೆಯ ದರ್ಪ ಕುರಿತಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ನೆರಮನೆಯವರು ಇಂತಹ ಘಟನೆ ಇದೇ ಮೊದಲಲ್ಲ. ಹಲವು ಬಾರಿ ನಾಯಿಗಳು ದಾಳಿ ಮಾಡಿವೆ. ಇದಕ್ಕೂ ಮೊದಲು ಮನೆ ಕೆಲಸದಾಕೆ, ತೋಟಗಾರ ಸೇರಿದಂತೆ ಐದು ಜನರಿಗೆ ನಾಯಿಗಳು ಕಚ್ಚಿತ್ತು. ಆದರೆ ಹಣ ಕೊಟ್ಟು ಅವರನ್ನು ಸುಮ್ಮನಾಗಿಸಲಾಗಿತ್ತು. ಪ್ರತಿ ಬಾರಿಯೂ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ ನಂತರ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ. ಆದರೆ ಈ ಬಾರಿ ನೆರೆಹೊರೆಯವರು ಎಫ್‌ಐಆರ್ ದಾಖಲಿಸಲು ಸೂಚಿಸಿದ್ದಾರೆ. ಡಾ. ಸಂಧ್ಯಾ ಅವರ ಮನೆಯಲ್ಲಿ ಮೂರು ನಾಯಿಗಳಿವೆ. ಅವು ಸಾಕಷ್ಟು ರಕ್ಕಸವಾಗಿವೆ. ಇವುಗಳಲ್ಲಿ ಎರಡು ಪಿಟ್ಬುಲ್ಗಳು ಮತ್ತು ಇನ್ನೊಂದು ನಾಯಿ ಸೇರಿದೆ.
Advertisement