
ಬೆಂಗಳೂರು: ಕೆಲವು ಗೊಂದಲಗಳ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಯನ್ನು ತಡೆಹಿಡಿಯಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಶಯಗಳನ್ನು ನಿವಾರಿಸಲು ಮುಂದಿನ ಸಂಪುಟ ಸಭೆಯಲ್ಲಿ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಂಪೂರ್ಣ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಆದರೆ ವಿಚಾರ ಆಗಲೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಸೂದೆಯಲ್ಲಿ ಕೆಲವು ಗೊಂದಲಗಳಿವೆ. ಮುಂದಿನ ಸಂಪುಟ ಸಭೆಯಲ್ಲಿ ಆ ಗೊಂದಲಗಳನ್ನು ನಿವಾರಿಸಿ, ವಿಸ್ತೃತ ಚರ್ಚೆ ನಡೆಸೋಣ ಎಂದು ಸದನಕ್ಕೆ ಸಿದ್ದರಾಮಯ್ಯ ತಿಳಿಸಿದರು.
ವಿಧೇಯಕ ಕುರಿತು ರಾಜ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂಬ ಇಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಸದನದಲ್ಲಿ ಆಗ್ರಹಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಎಕ್ಸ್ ನಲ್ಲಿ ಮೂರು ಬಾರಿ ಈ ವಿಚಾರವಾಗಿ ಬದಲಾವಣೆ ಮಾಡಿದ್ದರು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ಮೊದಲು ಪೋಸ್ಟ್ ಮಾಡಿದ್ದರು ಎಂದು ಅಶೋಕ ಸ್ಮರಿಸಿದರು. ನಂತರ ಮುಖ್ಯಮಂತ್ರಿಗಳು ಮತ್ತೊಂದು ಸಂದೇಶವನ್ನು ಪೋಸ್ಟ್ ಮಾಡಿ, ಕನ್ನಡಿಗರಿಗೆ ನಿರ್ವಹಣಾ ವಿಭಾಗದಲ್ಲಿ ಶೇಕಡ 50ರಷ್ಟು ಮತ್ತು ನಿರ್ವಹಣೇತ್ತರ ವರ್ಗದಲ್ಲಿ ಶೇಕಡ 75ರಷ್ಟು ಮೀಸಲಾತಿ ಇರುತ್ತದೆ ಎಂದು ಹೇಳಿದರು.
ಅಂತಿಮವಾಗಿ ಸಿದ್ದರಾಮಯ್ಯ ಮಸೂದೆಯನ್ನು ತಡೆಹಿಡಿಯುವುದಾಗಿ ಘೋಷಿಸಿದರು. ಈ ಮೂಲಕ ಕರ್ನಾಟಕದಲ್ಲಿ ತುಘಲಕ್ ಸರ್ಕಾರವಿದೆ ಎಂದು ಅಶೋಕ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುಘಲಕ್ ಸರ್ಕಾರ ಇಲ್ಲ, ಸಿದ್ದರಾಮಯ್ಯ ಸರ್ಕಾರ, ಮುಂದಿನ ಸಂಪುಟ ಸಭೆಯಲ್ಲಿ ಮಸೂದೆ ಮಂಡಿಸುತ್ತೇವೆ ಎಂದರು.
ಖಾಸಗಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗ ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ 2024' ಅನ್ನು ರಾಜ್ಯ ಸಚಿವ ಸಂಪುಟ ಸೋಮವಾರ ಅಂಗೀಕರಿಸಿತ್ತು. ಯಾವುದೇ ಉದ್ಯಮ, ಕಾರ್ಖಾನೆ ಅಥವಾ ಇತರ ಸಂಸ್ಥೆಗಳು ನಿರ್ವಹಣಾ ವಿಭಾಗಗಳಲ್ಲಿ 50 ಪ್ರತಿಶತ ಸ್ಥಳೀಯ ಅಭ್ಯರ್ಥಿಗಳನ್ನು ಮತ್ತು ನಿರ್ವಹಣೇತರ ವರ್ಗಗಳಲ್ಲಿ ಶೇಕಡಾ 70 ಪ್ರತಿಶತವನ್ನು ನೇಮಿಸಬೇಕು ಎಂದು ಮಸೂದೆಯಲ್ಲಿ ಸೇರಿಸಲಾಗಿದೆ.
Advertisement