
ಬೆಂಗಳೂರು: ಕರ್ನಾಟಕದಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಶೇ.100ರಷ್ಟು ಮೀಸಲಾತಿ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮದು ಕನ್ನಡ ಪರ ಸರ್ಕಾರ, ಕನ್ನಡಿಗರ ಹಿತ ಕಾಪಾಡುವುದು ನಮ್ಮ ಆದ್ಯತೆ ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡಿಗರು ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಕನ್ನಡಿಗರಿಗೆ ಕನ್ನಡ ನಾಡು, ಮಾತೃಭೂಮಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು. ನಮ್ಮದು ಕನ್ನಡ ಪರ ಸರ್ಕಾರ ಎಂದು ತಿಳಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಖಾಸಗಿ ಕಂಪನಿಗಳಲ್ಲಿ ಎಲ್ಲಾ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಇರುತ್ತದೆ ಎಂದು ಹೇಳಿದ್ದರು. ಸರ್ಕಾರ ಈ ನಿರ್ಣಯಕ್ಕೆ ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಗಳು ಆರಂಭವಾದವು. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದರು.
ನಾಸ್ಕಾಮ್ ವಿರೋಧ
ಕನ್ನಡಿಗರ ಮೀಸಲು ವಿಧೇಯಕಕ್ಕೆ ಉದ್ಯಮಿಗಳು ಮಾತ್ರವಲ್ಲದೆ, ನಾಸ್ಕಾಮ್ ಕೂಡ ವಿರೋಧ ವ್ಯಕ್ತಪಡಿಸಿದೆ.
ಟೆಕ್ ವಲಯವು ರಾಜ್ಯದ GDP ಯ ಶೇ.25 ರಷ್ಟು ಕೊಡುಗೆ ನೀಡುತ್ತದೆ. ಅಂದರೆ, ದೇಶದ ಡಿಜಿಟಲ್ ಪ್ರತಿಭೆಯ ಕಾಲು ಭಾಗದಷ್ಟು ಇದೆ. ಅಂದರೆ, 11000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು ಒಟ್ಟು GCC ಗಳಲ್ಲಿ ಶೇ.30 ರಷ್ಟು ಪಾಲು ಹೊಂದಿದೆ. ಈ ರೀತಿಯ ಮಸೂದೆಯು ಉದ್ಯಮದ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ, ಅಲ್ಲದೆ, ಉದ್ಯೋಗಗಳು ಮತ್ತು ರಾಜ್ಯದ ಜಾಗತಿಕ ಬ್ರ್ಯಾಂಡ್‌ನ ಮೇಲೆ ಪರಿಣಾಮ ಬೀರುತ್ತದೆ.
ಇನ್ನು, ಸ್ಥಳೀಯ ನುರಿತ ಪ್ರತಿಭೆಗಳು ವಿರಳವಾಗಿರುವುದರಿಂದ ರಾಜ್ಯ ಸರ್ಕಾರ ಜಾರಿಗ ತರಲು ಹೊರಟಿರುವ ಈ ವಿಧೇಯಕದ ನಿರ್ಬಂಧಗಳು ಕಂಪನಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಮಸೂದೆ?
ಕರ್ನಾಟಕ ಸರ್ಕಾರ 'ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024 ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಮುಂದಾಗಿದೆ. ಇದರಿಂದ ಉದ್ಯೋಗದಿಂದ ವಂಚಿರಾಗುತ್ತಿದ್ದ ಕನ್ನಡಿಗರಿಗೆ ಅನುಕೂಲ ಆಗಲಿದೆ.
ಈಗಾಗಲೇ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ, ರಾಜ್ಯಪಾಲರ ಅಂಕಿತ ಬಿದ್ದರೆ ಮಸೂದೆ ಶೀಘ್ರದಲ್ಲೇ ಕಾನೂನು ಆಗಿ ಜಾರಿಗೆ ಬರಲಿದೆ. ಈ ಮಸೂದೆಗೆ ಉದ್ಯಮಿಗಳ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತದೆ ಎಂಬುದು ಕೂಡ ಚರ್ಚೆಯ ವಿಷಯವಾಗಿದೆ.
ಹಾಗಾದರೆ ಮೀಸಲಾತಿ ಮಸೂದೆ ಜಾರಿಯಾದರೆ ಯಾರು ಅರ್ಹರು? ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ-2024ರಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಕರ್ನಾಟಕದಲ್ಲಿ ಖಾಸಗಿ ವಲಯದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50 ರಿಂದ ಶೇ.75 ರವರೆಗೆ ಮೀಸಲಾತಿ ನೀಡಬೇಕು.
ಮ್ಯಾನೇಜ್‌ಮೆಂಟ್ ಹುದ್ದೆಗಳಲ್ಲಿ ಶೇ50ರಷ್ಟು, ನಾನ್ ಮ್ಯಾನೇಜ್‌ಮೆಂಜ್ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟ್ ಅನ್ನು ಸಿದ್ದರಾಮಯ್ಯ ಅವರು ಡಿಲೀಟ್ ಮಾಡಿರುವುದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಇದಕ್ಕೆ ಉದ್ಯಮಿಗಳ ವಿರೋಧ ಕಾರಣನಾ ಎಂಬ ಅನುಮಾನ ಕೂಡ ಮೂಡಿದೆ.
Advertisement