
ಬೆಂಗಳೂರು: ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಸ್ಕೈಡೆಕ್ ಪ್ರಾಜೆಕ್ಟ್ ನಗರದ ಹೊರವಲಯದಲ್ಲಿರುವ ಹೆಮ್ಮಿಗೆಪುರದಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಈ ಹಿಂದೆ, ಸಿವಿ ರಾಮನ್ ನಗರದಲ್ಲಿರುವ ಎನ್‌ಜಿಇಎಫ್‌ನಲ್ಲಿ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲು ಯೋಜಿಸಲಾಗಿತ್ತು, ಆದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪೈಲಟ್‌ಗಳಿಗೆ ತೊಂದರೆಯಾಗಬಹುದು ಎಂದು ಆಕ್ಷೇಪಣೆ ಎತ್ತಿದ ಹಿನ್ನೆಲೆಯಲ್ಲಿ ಬೇರೆಡೆ ವರ್ಗಾಯಿಸಲು ನಿರ್ಧರಿಸಲಾಗಿದೆ.
ಆಕಾಶ ಗೋಪುರ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಡಲು ಆಸ್ಟ್ರಿಯಾ ಮೂಲದ ಸಂಸ್ಥೆಯನ್ನು ಈಗಾಗಲೇ ಬಿಬಿಎಂಪಿ ಆಯ್ಕೆ ಮಾಡಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಸಂಸ್ಥೆಯಷ್ಟೇ ಭಾಗವಹಿಸಿದ್ದರಿಂದ ಅದೇ ಕಂಪನಿಗೆ ಡಿಪಿಆರ್ ಸಿದ್ಧಪಡಿಸುವ ಹೊಣೆ ವಹಿಸಲಾಗಿದೆ. ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಎಂಜಿನಿಯರ್ ಹೇಳಿದರು.
ಮೂಲಗಳ ಪ್ರಕಾರ ಯಶವಂತಪುರ ಕ್ಷೇತ್ರದ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ 25 ಎಕರೆಯಲ್ಲಿ ಸ್ಕೈಡೆಕ್ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಯೋಜನೆಯು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಗೆ ಸಮೀಪದಲ್ಲಿರುವುದರಿಂದ, ಸರ್ಕಾರವು ಭೂಮಿಯನ್ನು ಹುಡುಕಲು ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದರೆ ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣವಾಗಲಿದೆ. ಇದು ವಾಣಿಜ್ಯ, ಸಾಹಸ ಕ್ರೀಡೆಗಳು ಮತ್ತು ಮನರಂಜನಾ ವಲಯಗಳಿಗೆ ಅವಕಾಶ ಕಲ್ಪಿಸುತ್ತದೆ. ಪಿಇಎಸ್ ಕಾಲೇಜಿನಿಂದ ಹೆಮ್ಮಿಗೆಪುರಕ್ಕೆ ಸಂಪರ್ಕ ಕಲ್ಪಿಸಲು ಸರ್ಕಾರ ಮೆಟ್ರೋ ಮಾರ್ಗಗಳನ್ನು ವಿಸ್ತರಿಸುವ ಸಾಧ್ಯತೆಯಿದೆ.
ಇದು 850 ಕೋಟಿ ರೂ ವೆಚ್ಚದಲ್ಲಿ ಈ ಪ್ರಾಜೆಕ್ಟ್ ನಿರ್ಮಾಣವಾಗಲಿದೆ. 250 ಮೀಟರ್ ಎತ್ತರದ ಆಕಾಶ ಗೋಪುರದ ತಳಭಾಗದಲ್ಲಿ ವಾಣಿಜ್ಯ ಮಳಿಗೆಗಳು, ಆಹಾರ, ಆಟ, ವಿಶ್ರಾಂತಿ ಕೊಠಡಿ, ಶೌಚಾಲಯಗಳೂ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಗೋಪುರದ ಸುತ್ತಲೂ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ಕೈಡೆಕ್ ಯೋಜನೆ ಜಾರಿಯಾದರೆ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Advertisement