
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಡೀಕರಣ ಹಾಗೂ ಹೆಚ್ಚು ಆದಾಯ ಬರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದ್ದು, ಆಸ್ತಿಗಳ ನಗದೀಕರಣದ ಯಾವುದೇ ಪ್ರಸ್ತಾವ ಇಲ್ಲ ಎಂದು ವಿಧಾನ ಪರಿಷತ್ ಸಭಾ ನಾಯಕ ಎನ್.ಎಸ್. ಬೋಸರಾಜು ಅವರು ಗುರುವಾರ ಸ್ಪಷ್ಟಪಡಿಸಿದರು.
ಪರಿಷತ್ತಿನಲ್ಲಿ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರು, ಮೇ 18, 2024 ರಂದು ಮೂಲಸೌಕರ್ಯ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಒಟ್ಟು ಆಸ್ತಿ ಮತ್ತು ಹಣಗಳಿಸಬಹುದಾದ ಆಸ್ತಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಕೇಳಿದೆ. ನಾರಾಯಣ ಮೂರ್ತಿ, ಮೋಹನ್ ದಾಸ್ ಪೈ ಮತ್ತು ಇತರ ಉದ್ಯಮದ ತಜ್ಞರು, ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ಇತರರಿಂದ ಆದಾಯ ಕ್ರೋಢೀಕರಣದ ಕುರಿತು ಸಲಹೆಗಳನ್ನು ಪಡೆಯುವಾಗ ಬಿಸಿಜಿ ಸಲಹೆಗಾರರನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಬೋಸರಾಜು ಅವರು, ಆರ್ಥಿಕ ಇಲಾಖೆಯು ವಿವಿಧ ಇಲಾಖೆಗಳು ಮತ್ತು ಅವುಗಳ ಅಧೀನದ ನಿಗಮ, ಮಂಡಳಿ, ಪ್ರಾಧಿಕಾರಗಳ ಆಸ್ತಿಗಳ ಮಾಹಿತಿಯ ಸಂಗ್ರಹಿಸಲು ಸಮಗ್ರ ಪಟ್ಟಿ ಸಿದ್ಧಪಡಿಸುವಂತೆ ಆಂತರಿಕ ಸುತ್ತೋಲೆ ಕಳುಹಿಸಿದೆ. ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಿದು ಎಂದು ಹೇಳಿದರು.
ಒಂದೊಮ್ಮೆ ಆಸ್ತಿಗಳ ನಗದೀಕರಣ ಮಾಡುವುದಾದರೆ, ಸಂಪುಟ ಸಭೆಯಲ್ಲಿ ಆ ವಿಚಾರವನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದೂ ತಿಳಿಸಿದರು.
ಸದನದಲ್ಲಿ ಅಶೋಕ್-ಯತ್ನಾಳ್ ಜಟಾಪಟಿ
ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿಗೆ ಆಡಳಿತ ಪಕ್ಷವನ್ನು ಎದುರಿಸುವುದಕ್ಕಿಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಎದುರಿಸುವುದು ಭಾರೀ ಸವಾಲಾಗಿ ಪರಿಣಮಿಸಿದೆ.
ಸದನದಲ್ಲಿ ಬಹಿರಂಗವಾಗಿ ಯತ್ನಾಳ್ ಕೊಡುವ ಟಾಂಗ್ ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.
ಸದನದಲ್ಲಿ ಯತ್ನಾಳ್ ಎದ್ದು ನಿಂತರೆ ಸಾಕು, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ ಸ್ವಪಕ್ಷದ ನಾಯಕರನ್ನೇ ಪದೇ ಪದೇ ಚುಚ್ಚುತ್ತಾರೆ. ಸದನದಲ್ಲೇ ತಮ್ಮ ಪಕ್ಷದ ನಾಯಕರ ವಿರುದ್ಧ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಆರೋಪವನ್ನು ಮಾಡುತ್ತಿದ್ದಾರೆ. ಯತ್ನಾಳ್ ನಡೆ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ವಿಧಾನಸಭೆಯಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರವಾಗಿ ಮಾತನಾಡುವ ವೇಳೆ ಮಾತನಾಡಿದ ಅಶೋಕ್, “ಖಾಸಗಿ ವಲಯದಲ್ಲಿ ಕನ್ನಡಿಗರಿಗೆ 100% ಮೀಸಲಾತಿ ಎಂದು ಘೋಷಣೆ ಮಾಡಲಾಯಿತು. ಅರ್ಧ ಗಂಟೆಯಲ್ಲಿ ಸಿಎಂ ಅದನ್ನು ಡಿಲೀಟ್ ಮಾಡಿ 75% ಹಾಗೂ 50% ಮೀಸಲಾತಿ ಎಂದು ಪೋಸ್ಟ್ ಮಾಡಲಾಯಿತು. ಮತ್ತೆ ಅರ್ಧ ಗಂಟೆಯಲ್ಲಿ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಯತ್ನಾಳ್ ಅವರು ಮಾತನಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಬಹಳ ಹೊಗಳಿದರು. ಸಿದ್ದರಾಮಯ್ಯ ಅವರು ಗಟ್ಟಿ, ನೀವು ಇರಬೇಕೆಂದಿದ್ದಾರೆಂದು ಹೇಳಿದರು.
ಈ ವೇಳೆ ಎದ್ದು ನಿಂತ ಯತ್ನಾಳ್, ಇದಕ್ಕೆ ಬಣ್ಣ ಹಚ್ಚಲು ಹೋಗಬೇಡಿ. ನಾನು ಸಿಎಂ ಬಳಿ ಒಂದೂ ಕೆಲಸಕ್ಕೆ ಹೋಗಿಲ್ಲ. ಅವರ ಕಚೇರಿಗೆ ಹೋಗಿಲ್ಲ, ಮನೆಗೂ ಹೋಗಿಲ್ಲ. ನೀವು ಫುಲ್ ಟಾಸ್ ಹೊಡೆದರೆ ಯತ್ನಾಳ್ ಏನೂ ಆಗುವುದಿಲ್ಲ. ಯತ್ನಾಳ್ ಸಿದ್ದರಾಮಯ್ಯ ಮನೆಗೆ ಹೋಗಿಲ್ಲ. ನನ್ನ ಪರವಾಗಿ ಯಾವುದೇ ಕೆಲಸ ಮಾಡಿಕೊಂಡಿಲ್ಲ. ನಾನು ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ ಎಂದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಿದ್ದರಾಮಯ್ಯ ಈ ಹಿಂದೆ ಇದ್ದಂತೆ ಸ್ಟ್ರಾಂಗ್ ಆಗಿ ಇಲ್ಲ ಎಂದು ಹೇಳಿದ್ದಾರೆ. ಯತ್ನಾಳ್ ಅವರೇ ನಾನು ಬದಲಾಗಿಲ್ಲ, ಅವತ್ತು ಹೇಗಿದ್ದೆ ಇವತ್ತು ಹಾಗೇ ಇದ್ದೇನೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಯತ್ನಾಳ್, ಇಲ್ಲ ನೀವು ಮೊದಲಿನ ಹಾಗೆ ಇಲ್ಲ ಎಂದಾಗ ಎಲ್ಲರೂ ಜೋರಾಗಿ ಚಪ್ಪಾಳೆ ಹೊಡೆದ್ರು,, ಇದನ್ನೇ ಇಟ್ಟು ಕೊಂಡು ಯತ್ನಾಳ್ ಸಿದ್ದರಾಮಯ್ಯಗೆ ಕಾಲೆಳೆದರು.
ಯತ್ನಾಳ್ ಅವರೆ ನೀವು ಅಂದು ಹೇಳಿದ್ದರಲ್ಲ ಅಪ್ಪಾಜಿ ಸಂಸ್ಕೃತಿ ಬೇಡ ಎಂದು ಅದು ಸತ್ಯವಾದ ಮಾತು ಎಂದು ಶಬ್ಬಾಸ್‌ಗಿರಿ ಕೊಟ್ಟರು… ಅಪ್ಪಾಜಿ ಸಂಸ್ಕೃತಿ ಹೋಗಬೇಕು ಇದು ನಡೀಬಾರದು ಎಂದು ಯತ್ನಾಳ್ ಧ್ವನಿಗೂಡಿಸಿದರು.
ಅಬಕಾರಿ ಸಿಎಲ್ 7 ಪರವಾನಗಿ ವಿಚಾರ: ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ
ಇದೇ ವೇಳೆ ದ್ಯದ ಪರವಾನಗಿ ನೀಡಲು ಅಧಿಕಾರಿಗಳು ಲಂಚ ತಿನ್ನುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರೇ ಸರ್ಕಾರ ವಿರುದ್ಧ ಆರೋಪ ಮಾಡಿದ ಬೆಳವಣಿಗೆ ವಿಧಾನ ಪರಿಷತ್ ನಲ್ಲಿ ಕಂಡು ಬಂದಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಅವರು ಈ ಆರೋಪ ಮಾಡಿದರು.
CL-7 ಮದ್ಯದ ಅಂಗಡಿಗೆ ಅನುಮತಿ ನೀಡಲು 80 ರಿಂದ 85 ಲಕ್ಷ ರೂ. ಲಂಚ ಪಡೆದು ಅನುಮತಿ ನೀಡಲಾಗುತ್ತಿದೆ. ನನ್ನ ಜಿಲ್ಲೆಯಲ್ಲಿಯೇ ಇದು ಆಗುತ್ತಿದೆ. ನಿಯಮ ಬಿಟ್ಟು ಲಕ್ಷಾಂತರ ರೂ. ಪಡೆದು CL7 ಅನುಮತಿ ನೀಡಲಾಗುತ್ತಿದೆ. ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಮುಂದುವರಿದು ಕೋಲಾರದಲ್ಲಿ ಈ ಅಕ್ರಮ ದೊಡ್ಡದಾಗಿ ನಡೆಯುತ್ತಿದೆ. ತಾಲೂಕುವಾರು ಲಂಚ ಫಿಕ್ಸ್ ಮಾಡಿದ್ದಾರೆ. ಒಂದೊಂದು ತಾಲೂಕಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ರಾಜಾರೋಷವಾಗಿ ಲೈಸೆನ್ಸ್ ಕೊಟ್ಟು ಕಳ್ಳತನ ಮಾಡ್ತಿದ್ದಾರೆ. ಕಿರಾಣಿ ಅಂಗಡಿಗಳಲ್ಲಿ ಎಣ್ಣೆ ಸಿಗ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯಿಸಿದರು.
ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, CL7ಗೆ ಅನುಮತಿ ಕೊಡಲು ನಮ್ಮದೇ ನಿಯಮ ಇವೆ. ನಿಯಮ ಪೂರೈಕೆ ಮಾಡಿದರೆ ಮಾತ್ರ ಅನುಮತಿ ಕೊಡುತ್ತೇವೆ. ಅಧಿಕಾರಿಗಳು ಲಂಚ ಪಡೆಯೋ ವಿಚಾರಗಳು ನನ್ನ ಗಮನಕ್ಕೂ ಬಂದಿದೆ. ಅಂತಹವರ ಮೇಲೆ ಕ್ರಮ ತೆಗೆದುಕೊಳ್ತೀವಿ ಎಂದು ಭರವಸೆ ನೀಡಿದರು.
Advertisement