
ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡ ಭಾನುವಾರ ಭೇಟಿ ನೀಡಿದ್ದು, ಕಾರ್ಯಾಚರಣೆ ಪರಿಶೀಲಿಸಿದರು.
ಕರ್ನಾಟಕದ ಅಂಕೋಲಾದ ಶಿರೂರು ಬಳಿ ಘಟನಾ ಸ್ಥಳದಲ್ಲಿ ಕೇರಳದ ಟ್ರಕ್ ಚಾಲಕ ಅರ್ಜುನ್‌ಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರಿಶೀಲಿಸಿದರು. ಸಚಿವರಿಗೆ ಆರ್ ವಿ ದೇಶಪಾಂಡೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ‘ಕರ್ನಾಟಕದ ಹಲವೆಡೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಿನ್ನೆ ಮೊನ್ನೆ ಕಾರವಾರ ಬಳಿ ಗುಡ್ಡ ಕುಸಿತ ಘಟನೆ ನಡೆದಿದೆ. 8-10 ಮಂದಿ ನಾಪತ್ತೆಯಾಗಿದ್ದು, 6 ಮೃತದೇಹಗಳು ಪತ್ತೆಯಾಗಿವೆ. ಅಗತ್ಯವಿದ್ದಲ್ಲಿ, ನಾವು ರಸ್ತೆಗಳನ್ನು ತೆರವುಗೊಳಿಸಲು ಕಾರ್ಯಾಚರಣೆಯನ್ನು ಮುಂದುವರಿಸಲು ಕಾಪ್ಟರ್ ಗಳ ನೆರವು ಪಡೆಯುತ್ತೇವೆ. ಜಾರಿದ ಅವಶೇಷಗಳು, ಇಳಿಜಾರು ಮತ್ತಷ್ಟು ಜಾರುವ ಸಾಧ್ಯತೆಯಿದೆ. ಆದ್ದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಲಾರಿ ಚಾಲಕನ ಫೋನ್ ರಿಂಗ್
ಪ್ರಸ್ತುತ ಚಾಲಕ ಅರ್ಜುನ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಚಾಲಕ ಅರ್ಜುನ್ ರ ಮೊಬೈಲ್ ರಿಂಗಣಿಸುತ್ತಿದ್ದು, ಮೊಬೈಲ್ ಫೋನ್ ಸ್ವಿಚ್ ಆನ್ ಆಗಿರುವುದು ಪತ್ತೆಯಾಗಿದೆ. ಸದ್ಯ ಈಗ ಅರ್ಜುನ್ ಬದುಕಿರುವ ಬಗ್ಗೆ ಸುಳಿವು ಸಿಕ್ಕಿದೆ. ಆತನ ಫೋನ್ ಹಾಗೂ ಲಾರಿ ಇಂಜಿನ್ ಆನ್ ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಅರ್ಜುನ್ ಕುಟುಂಬ ಸದಸ್ಯರು ಆಶಾಭಾವನೆ ಹೊರ ಹಾಕಿದ್ದಾರೆ.
ಗುಡ್ಡ ಕುಸಿತ ಸಂಭವಿಸಿ ಅರ್ಜುನ್ ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದು ಜುಲೈ 18ರ ಗುರುವಾರ ರಾತ್ರಿಯ ವರೆಗೂ ಲಾರಿ ಇಂಜನ್ ಚಾಲನೆಯಲ್ಲಿತ್ತು. ಹಾಗೂ ಶುಕ್ರವಾರ ಬೆಳಗ್ಗೆ ಅರ್ಜುನ್‌ನ ಫೋನ್ ರಿಂಗ್ ಆಗಿದೆ. ರೇಂಜ್ ಸಿಕ್ಕಾಗಲೆಲ್ಲ ಫೋನ್ ಆಕ್ಟಿವ್ ಆಗಿದೆ. ಇದರ ಅರ್ಥ ಅವರು ಎಲ್ಲೋ ಒಂದು ಕಡೆ ಬದುಕಿದ್ದಾರೆ ಎಂದು ಅರ್ಜುನ್ ಪತ್ನಿ ಕೃಷ್ಣಪ್ರಿಯಾ ಅವರು ಕೇರಳದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲಾರಿಯು ಗುಡ್ಡ ಕುಸಿತ ಅವಶೇಷದಲ್ಲಿ ಸಿಲುಕಿರದೇ ಬೇರೆ ಕಡೆಯೂ ಇರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಸಂಶಯ ಹೊರ ಹಾಕಿದ್ದಾರೆ. ಇನ್ನು ಅರ್ಜುನ್ ಬದುಕಿರುವ ಸಾಧ್ಯತೆಗಳು ಹೆಚ್ಚಿವೆ. ನಮ್ಮ ಕಸಿನ್ ಕಾಲ್ ಮಾಡಿದಾಗ ಫೋನ್ ಶುಕ್ರವಾರ ಬೆಳಗ್ಗೆ ಸ್ವೀಟ್ಸ್ ಆಫ್ ಆಗಿದೆ. ಕಾರ್ಯಾಚರಣೆಗೆ ಸೇನೆ ಕರೆಸಬೇಕು ಎಂದು ಕಾಣೆಯಾಗಿರುವ ಅರ್ಜುನ್ ಸಹೋದರಿ ತಿಳಿಸಿದ್ದಾರೆ.
ತಲಾ 5 ಲಕ್ಷ ರೂ.ಪರಿಹಾರ
ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಈ ಹಿಂದೆ ತಿಳಿಸಿದ್ದರು. ಈ ಕುರಿತು ಸದನಕ್ಕೆ ಮಾಹಿತಿ ನೀಡಿದ್ದ ಅವರು, 'ನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಕ್ಯಾಂಟೀನ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ' ಎಂದು ಹೇಳಿದರು.
Advertisement