Gokak Falls ನಲ್ಲಿ ಪ್ರವಾಸಿಗರ ಹುಚ್ಚಾಟ; ರೀಲ್ಸ್ ಗಾಗಿ ಅಪಾಯಕಾರಿ ಸ್ಟಂಟ್!
ಬೆಳಗಾವಿ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಬಹುತೇಕ ಎಲ್ಲ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ಇದರ ನಡುವೆಯೇ ಜಲಪಾತಗಳ ಬಳಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದರೂ ಪ್ರವಾಸಿಗರು ಮಾತ್ರ ಜಲಪಾತಗಳ ಬಳಿ ಅಪಾಯ ಕಡೆಗಣಿಸಿ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ನಿಷೇಧದ ನಡುವೆಯೂ ಭದ್ರತಾ ಸಿಬ್ಬಂದಿಗಳ ಕಣ್ಣಪ್ಪಿಸಿ ಪ್ರವಾಸಿಗರು ಮೋಜು, ಮಸ್ತಿ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸುತ್ತಮುತ್ತಲಿನ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಭಾರತದ ನಯಾಗರ ಜಲಪಾತ ಅಂತಾನೇ ಹೆಸರುವಾಸಿಯಾಗಿರುವ ಗೋಕಾಕ ಜಲಪಾತದಲ್ಲಿ ನಯನ ಮನೋಹರ ದೃಶ್ಯ ಸೃಷ್ಟಿಯಾಗಿದೆ. ಹೀಗಾಗಿ, ರಜೆ ದಿನವಾದ ಭಾನುವಾರ ಪ್ರವಾಸಿಗರು ಜಲಪಾತದ ಎದುರು ಹುಚ್ಚಾಟ ನಡೆಸಿದ್ದಾರೆ.
ಗೋಕಾಕ ಜಲಪಾತ 171 ಅಡಿ ಆಳಕ್ಕೆ ಧುಮುಕ್ಕುತ್ತದೆ. ಇಲ್ಲಿ ಭೇಟಿ ನೀಡಿದ ಕೆಲ ಪ್ರವಾಸಿಗರು ಬಂಡೆಯ ಮೇಲೇರಿ ಜಲಪಾತದ ತುತ್ತ ತುದಿಗೆ ಹೋಗುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಫೋಟೋಗೆ ಪೋಸ್ ಕೊಟ್ಟು, ಸೆಲ್ಪಿ ಕ್ಲಿಕ್ಕಿಸಿಕೊಂಡು ಅಲ್ಲಿಯೇ ರೀಲ್ಸ್ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಗೋಕಾಕ ಜಲಪಾತದ ತುದಿಗೆ ಹೋಗಿ ಕಾಲು ಜಾರಿ ಬಿದ್ದು ಕೆಲ ಪ್ರವಾಸಿಗರು ಮೃತಪಟ್ಟ ಪ್ರಕರಣಗಳು ನಡೆದಿದ್ದವು. ಇಷ್ಟಾದರೂ ಪ್ರವಾಸಿಗರು ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ