ನಟ ದರ್ಶನ್ ಜೈಲುಪಾಲು: ಸಂಕಷ್ಟದಿಂದ ಪಾರು ಮಾಡಲು ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ಕೊಲ್ಲೂರು: ಸ್ಯಾಂಡಲ್ ವುಡ್ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಎರಡು ತಿಂಗಳಾಗುತ್ತಾ ಬಂದಿದೆ. ಜೈಲಿನ ಊಟ ಮತ್ತು ಸೌಲಭ್ಯ ಒಗ್ಗುತ್ತಿಲ್ಲ, ಮನೆಯೂಟ, ಹಾಸಿಗೆ ತರಿಸಲು ಅವಕಾಶ ಮಾಡಿಕೊಡಿ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಕೋರ್ಟ್ ವಜಾ ಮಾಡಿದೆ.
ಜೈಲು ಪಾಲಾಗಿರುವುದು ಕೇವಲ ದರ್ಶನ್ ಅವರಿಗಷ್ಟೇ ಅಲ್ಲದೆ ಅವರ ಪತ್ನಿ, ಮಗ, ತಾಯಿ ಮತ್ತು ಸೋದರ ದಿನಕರ್ ಗೆ ಕೂಡ ಅಪಾರ ಬೇಸರ, ಕಷ್ಟ ತಂದೊಡ್ಡಿದೆ. ಈ ಕಷ್ಟದಿಂದ ಆದಷ್ಟು ಬೇಗನೆ ಹೊರಬರಲು ಅವರ ಪತ್ನಿ ವಿಜಯಲಕ್ಷ್ಮೀ ದೇವರ ಮೋರೆ ಹೋಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪ್ರಖ್ಯಾತ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ.
ಈಗ ಆಷಾಢ ಮಾಸ, ದೇವಿಯ ಆರಾಧನೆ, ಹೀಗಾಗಿ ವಿಜಯಲಕ್ಷ್ಮಿಯವರು ತಮ್ಮ ಆಪ್ತರೊಂದಿಗೆ ನಿನ್ನೆ ಅಪರಾಹ್ನ ಕೊಲ್ಲೂರಿಗೆ ಆಗಮಿಸಿ ನರಸಿಂಹ ಅಡಿಗ ಎಂಬುವವರ ಬಳಿ ನವಚಂಡಿಕಾ ಯಾಗವನ್ನು ಮಾಡಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹೋಮ-ಹವನ ನಡೆಯುತ್ತಿದ್ದು, ಇಂದು ಬೆಳಗ್ಗೆ ಪೂರ್ಣಾಹುತಿಯಲ್ಲಿ ವಿಜಯಲಕ್ಷ್ಮೀ ಭಾಗಿ ಆಗಿದ್ದಾರೆ. ದರ್ಶನ್ ಬಂಧನ ಮುಕ್ತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯಲಕ್ಷ್ಮಿ ಅವರು ತಮ್ಮ ಆಪ್ತೆಯರೊಂದಿಗೆ ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಮಾಡಿಸುತ್ತಿರುವ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ.
ದರ್ಶನ್ ಬಂಧನ ಬಳಿಕ ವಾರಕ್ಕೊಮ್ಮೆ ವಿಜಯಲಕ್ಷ್ಮಿ ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬರುತ್ತಿದ್ದಾರೆ. ಮೊನ್ನೆಯಷ್ಟೇ ಮೈದುನ ದಿನಕರ್ ತೂಗುದೀಪ ಜೊತೆ ವಿಜಯಲಕ್ಷ್ಮಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.
ತಮಗೆ ಕಷ್ಟ, ಆರೋಪಗಳು ಬಂದಾಗ ಅನೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಕೊಲ್ಲೂರು ಮೂಕಾಂಬಿಕೆ ಅಮ್ಮನ ಮೊರೆ ಹೋಗುವುದು ಸಾಮಾನ್ಯ, ದೇಶದ 51 ಶಕ್ತಿಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕೆ ಕೂಡ ಒಂದು ನಂಬಲಾಗಿದ್ದು, ಇಲ್ಲಿಗೆ ವಿಶೇಷ ಶಕ್ತಿ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ