
ಬೆಂಗಳೂರು: ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ರಾಜ್ಯಾದ್ಯಂತ ಮಾರ್ಷಲ್‌ಗಳನ್ನು ಒಳಗೊಂಡ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಶುಕ್ರವಾರ ಹೇಳಿದರು.
ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವರು ಈ ನಿರ್ದೇಶನ ನೀಡಿದರು.
ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ತಂಡ ರಚಿಸಿ, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಚಮಚ, ತಟ್ಟೆ, ಲೋಟ ಇತ್ಯಾದಿ ತಯಾರಿಸುವ ಘಟಕಗಳು, ಗೋದಾಮು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇಟ್ಟು, ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವುದನ್ನು ನಿಯಂತ್ರಿಸಲು ಸಾರಿಗೆ, ಪೊಲೀಸ್, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ತಿಳಿಸಿದರು.
ಪರಿಸರ ಸ್ನೇಹಿ ಗಣಪತಿಗೆ ಉತ್ತೇಜನ: ಗಣೇಶೋತ್ಸವಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಪಿಓಪಿ ಗಣೇಶಮೂರ್ತಿ ಪೂಜೆ ತ್ಯಜಿಸಲು ಮತ್ತು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪೂಜೆಗೆ ಉತ್ತೇಜನ ನೀಡಲು ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವಂತೆ ಇದೇ ವೇಳೆ ಸೂಚಿಸಿದರು.
ಟೈರ್ ಪೈರೋಲಿಸಿಸ್ ಸೇರಿದಂತೆ ಅತಿ ಹೆಚ್ಚು ಇಂಗಾಲ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವ, ರಾಸಾಯನಿಕ ತ್ಯಾಜ್ಯ ಮತ್ತು ಬಳಸಿದ ತೈಲವನ್ನು ಕೊಳವೆ ಬಾವಿಗೆ ಸುರಿಯುವ, ರಾಸಾಯನಿಕ ಯುಕ್ತ ತ್ಯಾಜವನ್ನು ಜಲ ಮೂಲಗಳಿಗೆ ಸಂಸ್ಕರಿಸದೆ ಹರಿಸುವ ಕೈಗಾರಿಕಾ ಘಟಕಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದರು.
Advertisement