
ಉತ್ತರ ಕನ್ನಡ: ಅಂಕೋಲಾದ ಶಿರೂರು ಭೂಕುಸಿತ ಪ್ರಕರಣದಲ್ಲಿ (Shirur landslide) ನಾಪತ್ತೆಯಾದವರ ಪತ್ತೆಗೆ ಶತ ಪ್ರಯತ್ನ ಮಾಡಲಾಗುತ್ತಿದ್ದು, ಶೀಘ್ರ ಶೋಧ ಕಾರ್ಯಾಚರಣೆ ಪುನಾರಂಭಿಸಲಾಗುತ್ತದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಪ್ರತಿಕೂಲ ವಾತಾವರಣ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಶಾಸಕ ಸತೀಶ್ ಸೈಲ್, 'ಸರ್ಕಾರದೊಂದಿಗೆ ಮಾತನಾಡಿ ಸಾಧ್ಯವಾದ ಪ್ರಯತ್ನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಮುಂದಿನ ಕಾರ್ಯಾಚರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ನೆನ್ನೆಯಿಂದ ಶತ ಪ್ರಯತ್ನ ಮಾಡಿದೆ. ನದಿಯ ಪರಿಸ್ಥಿತಿ ನೋಡಿ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೂ ಅವರು ನಾಲ್ಕನೇ ಪಾಯಿಂಟ್‌ನಲ್ಲಿ ಹುಡುಕಾಡಿದ್ದಾರೆ. ಇವತ್ತು ಮಣ್ಣು ಮಿಶ್ರಿತ ನೀರು ಹೆಚ್ಚಾಗಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಟ ಸಾಧ್ಯವಾಗಿಲ್ಲ.
ಕಣ್ಮರೆಯಾದವರ ಶೋಧಕ್ಕೆ ತಿರುಚ್ಚಿಯಲ್ಲಿ ಕ್ರೇನ್ ಇರುವ ಬೋಟ್ ಇದೆ. ಆದರೆ ಅದನ್ನು ಅಲ್ಲಿಂದ ತರಿಸಲು ತಡವಾಗಬಹುದು. ಅದು ಬಂದ ಕೂಡಲೇ ಮತ್ತೆ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಹೇಳಿದರು.
ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಉಸ್ತುವಾರಿ ಸಚಿವ
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಒಂದು ಕಡೆ ಮಣ್ಣಿನಡಿ ಲಾರಿ ಇದೆ ಎಂದಿದ್ದರು, ಒಂದು ವಾರದಲ್ಲಿ ಕಾರ್ಯಾಚರಣೆ ನಡೆಸಿ ಮಣ್ಣು ತೆಗೆದೆವು. ಈಗ ನೀರಿನಲ್ಲಿ ಇದೆ ಎಂದಾಗ ನದಿಯಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಎಲ್ಲಾ ಪ್ರಯತ್ನ ಮಾಡಿದರೂ ಮೂವರ ಮೃತ ದೇಹ ಸಿಗದಿರುವುದು ಬೇಸರ ತಂದಿದೆ. ದೇಹ ಸಿಗದೇ ಇದ್ದವರಿಗೂ ಅವರ ಅವಲಂಬಿತರ ಬಳಿ ಅಗ್ರಿಮೆಂಟ್ ಮಾಡಿಕೊಂಡು ಪರಿಹಾರ ನೀಡುತ್ತೇವೆ.
ಮೃತರ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾದರೆ ಅವರ ಜೊತೆ ನಾವು ಇರುತ್ತೇವೆ. ಕಾರ್ಯಾಚರಣೆ ಸ್ಥಗಿತ ಆಗಿಲ್ಲ, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ನಂತರ ಕಾರ್ಯಾಚರಣೆ ಮಾಡುತ್ತೇವೆ. ಮುಳುಗಿರುವ ಟ್ರಕ್ ಮೇಲಕ್ಕೆ ಎತ್ತುವ ಪ್ರಯತ್ನ ಮಾಡುತ್ತೇವೆ. ಗುಡ್ಡ ಕುಸಿತದ ಬಗ್ಗೆ ಮಾಹಿತಿ ಪಡೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
Advertisement