ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ದಾಖಲೆಯ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಮಳೆ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರಿಂದ ಎಚ್ಚೆತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ, ಬಿಡ್ಲ್ಯೂಎಸ್ಎಸ್ಬಿ, ಅಗ್ನಿ ಶಾಮಕ ಅಧಿಕಾರಿಗಳ ಜೊತೆ ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಪ್ರತಿ ವಾರ್ಡ್ಗಳಲ್ಲೂ ಮಳೆ ನೀರು ಹೋಗಲು ವ್ಯವಸ್ಥೆ, ಬಿದ್ದ ಮರಗಳ ತೆರವು ಸೇರಿದಂತೆ ಇನ್ನಿತರ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ ಮಳೆ ಹಾನಿ ಕುರಿತಂತೆ 24 ಗಂಟೆಯೂ ಕಾರ್ಯನಿರ್ವಹಿಸಿಸುವ ಕಂಟ್ರೋಲ್ ರೂಂ ಕನೆಕ್ಷನ್ ತಮ್ಮ ಮನೆಗೂ ನೀಡುವಂತೆ ಸೂಚಿಸಿದ್ದಾರೆ. ಈ ಮೂಲಕ ಮನೆಯಿಂದಲೇ ಕಂಟ್ರೋಲ್ ರೂಂ ಮಾನಿಟರ್ ಮಾಡಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಿನ್ನೆ ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದೆ. ಆದರೆ ಯಾರಿಗೂ ತೊಂದರೆ ಆಗಿಲ್ಲ, ಮೂವರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನು ಬೆಂಗಳೂರಿನಲ್ಲಿ ನಿನ್ನೆ 265 ಮರಗಳು ಬಿದ್ದಿದ್ದು 95 ಮರಗಳನ್ನು ತೆರವು ಮಾಡಬೇಕಿದೆ. ಬೆಂಗಳೂರು ನಗರದಲ್ಲಿ ಮಳೆಗೆ 261 ವಿದ್ಯುತ್ ಕಂಬಗಳು ಬಿದ್ದಿವೆ. ಅಲ್ಲದೆ ಕೆಲವು ಹಳೇ ಮನೆಗಳು ಕುಸಿದಿವೆ. ಸಮಸ್ಯೆ ಇದ್ದರೆ ಸಾರ್ವಜನಿಕರು 15533ಗೆ ಕರೆ ಮಾಡಿ ದೂರು ನೀಡಬಹುದು. ಇನ್ನು ಮಳೆ ಅವಾಂತರ ಕುರಿತಂತೆ ನಿನ್ನೆ ಬೆಂಗಳೂರಿನಲ್ಲಿ 694 ಕರೆಗಳು ಬಂದಿದ್ದು ಈ ಪೈಕಿ 500 ದೂರುಗಳನ್ನು ಸ್ವೀಕರಿಸಲಾಗಿದೆ ಎಂದರು.
"ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಎಲ್ಲರೂ ತಂಡವಾಗಿ ಕೆಲಸ ಮಾಡಬೇಕು ಎಂದು ನಾನು ನಿರ್ದೇಶನ ನೀಡಿದ್ದೇನೆ" ಎಂದು ಡಿಸಿಎಂ ಸುದ್ದಿಗಾರರಿಗೆ ತಿಳಿಸಿದರು.
Advertisement