
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕೆ.ಸುಧಾಕರ್ ಗೆಲುವಿನ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಹೆಸರಿನ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಂಬಂಧ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ನಕಲಿ ಪತ್ರ. ಆ ಪತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಿಡಿಗೇಡಿಗಳು ನಕಲಿ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ ಒಂದು ಮತ ಹೆಚ್ಚಿಗೆ ಲೀಡ್ ಪಡೆದರೆ ನಾನು ರಾಜೀನಾಮೆ ನೀಡುತ್ತೇನೆಂದು ಪ್ರದೀಪ್ ಈಶ್ವರ್ ಹೇಳಿಕೆ ಕೊಟ್ಟಿದ್ದರು.
ಆ ಹೇಳಿಕೆ ಜೊತೆಯಲ್ಲಿ ಇದನ್ನ ಮಾಜಿ ಸಚಿವ ಡಾ.ಕೆ ಸುಧಾಕರ್ ಸವಾಲಾಗಿ ಸ್ವೀಕರಿಸಬೇಕು ಎಂಬ ಆಗ್ರಹ ಕೂಡ ಮಾಡಿದ್ದರು. ಆದರೆ, ಪ್ರದೀಪ್ ಈಶ್ವರ್ ಸವಾಲಿಗೆ ಡಾಕ್ಟರ್ ಕೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
ಇತ್ತ ಕೆಲವು ಕಡೆ ಪ್ರದೀಪ್ ಈಶ್ವರ್ ತಮ್ಮ ಹಳೆಯ ಹೇಳಿಕೆಯನ್ನೇ ಮರು ಉಚ್ಚರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಹೇಳಿಕೆಯನ್ನು ಸಹ ಕೊಟ್ಟಿದ್ದರು.
ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ ಸುಧಾಕರ್ 20,941 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಕಲಿ ರಾಜೀನಾಮೆ ಪತ್ರವೊಂದು ವೈರಲ್ ಆಗಿದ್ದು, ಚರ್ಚೆಗೀಡಾಗಿದೆ.
Advertisement