
ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ದಳ ಪುರುಷತ್ವ ಪರೀಕ್ಷೆಗೊಳಪಡಿಸಿದೆ.
ಬೌರಿಂಗ್ ಆಸ್ಪತ್ರೆ ಆವರಣದಲ್ಲಿರುವ ಅಟಲ್ ಬಿಹಾರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲ ಪ್ರಜ್ವಲ್ ಅವರಿಗೆ ತಜ್ಞರ ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ನಡೆದಿದೆ. ಈ ಪರೀಕ್ಷಾ ವರದಿ ಇನ್ನೊಂದು ವಾರದಲ್ಲಿ ಎಸ್ಐಟಿಗೆ ಸಲ್ಲಿಕೆಯಾಗಬಹುದು ಎನ್ನಲಾಗಿದೆ.
ಈ ಸಂಬಂಧ ಪ್ರಜ್ವಲ್ ಅವರಿಂದ ವೀರ್ಯ, ರಕ್ತ ಮಾದರಿ ಸಂಗ್ರಹಿಸಲಾಗಿದೆ. ಇಲ್ಲದೆ ಲೈಂಗಿಕ ಕ್ರಿಯೆ ನಡೆಸಲು ಸಾಮರ್ಥ್ಯ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇತರೆ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ.
ಪುರುಷತ್ವ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ಎಸ್ಐಟಿ ಅಧಿಕಾರಿಗಳು, ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಪ್ರಜ್ವಲ್ ಅವರನ್ನು ಭದ್ರತೆಯಲ್ಲಿ ಕರೆದೊಯ್ದರು. ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಅವರನ್ನು ಮತ್ತೆ ಸಿಐಡಿ ಕಚೇರಿಗೆ ಕರೆತಂದು ಎಸ್ಐಟಿ ವಿಚಾರಣೆಗೊಳಪಡಿಸಿದೆ.
ಎರಡು ದಿನಗಳ ಹಿಂದೆ ಪುರುಷತ್ವ ಪರೀಕ್ಷೆ ನಡೆಸುವ ಸಲುವಾಗಿ ಪ್ರಜ್ವರ್ ಅವರನ್ನು ಎಸ್ಐಟಿ ಬೌರಿಂಗ್ ಆಸ್ಪತ್ರೆಗ ಕರೆದುಕೊಂಡು ಹೋಗಿತ್ತು. ಆದರೆ, ಆ ವೇಳೆ ಎಸ್ಐಟಿ ಸೂಚಿಸಿದ ಕೆಲ ವೈದ್ಯಕೀಯ ಪರೀಕ್ಷೆಗಳಿಗೆ ಕಾನೂನು ತೊಡಕಿನ ಬಗ್ಗೆ ವೈದ್ಯರು ತಿಳಿಸಿದ್ದರು. ಕೊನೆಗೆ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ಪ್ರಜ್ವಲ್ ಅವರನ್ನು ಪುರುಷತ್ವ ಪರೀಕ್ಷೆಗೆ ಎಸ್ಐಟಿ ಕರೆದೊಯ್ದಿದೆ.
ನ್ಯಾಯಾಲಯದ ಸಮ್ಮತಿ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆಗೆ ತಜ್ಞ ವೈದ್ಯರ ತಂಡವನ್ನು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರು ರಚಿಸಿದ್ದರು.
ಈ ನಡುವೆ ಎಸ್‌ಐಟಿ ಪ್ರಜ್ವಲ್ ಧ್ವನಿಯ 12 ವಿವಿಧ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ ಎಂದು ವರದಿಯಾಗಿದೆ.
ಪ್ರಜ್ವಲ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗುತ್ತಿರುವ ಕಾರಣ, ವೀಡಿಯೊಗಳಲ್ಲಿ ಕೇಳಿದ ಧ್ವನಿ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಧ್ವನಿ ಪರೀಕ್ಷೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ ಮೈಸೂರಿನ ಕೆ.ಆರ್.ನಗರ ಠಾಣೆ ಪೊಲೀಸರು ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇಂದು ಎಸ್ಐಟಿ ಕಸ್ಟಡಿ ಅಂತ್ಯ
ಇನ್ನು ಎಸ್ಐಟಿ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಜ್ವಲ್ ಅವರನ್ನು ಇಂದು ಹಾಜರುಪಡಿಸಲಿದ್ದಾರೆ. ಹೆಚ್ಚಿನ ತನಿಖೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡುವ ಸಾಧ್ಯತೆ ಇದೆ.
ಹೊಳೆನರಸೀಪುರ ಪೊಲೀಸ್ ಠಾಣೆ ಮತ್ತು ಸಿಐಡಿ ಠಾಣೆಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್ಐಟಿ ರಚಿಸಿ, ತನಿಖೆಗೆ ಆದೇಶಿಸಿತ್ತು.
ಇನ್ನು ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದ ಬಳಿಕ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದರು. ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನಟರ್ ನೋಟಿಸ್, ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು. ಕೊನೆಗೆ 35 ದಿನಗಳ ಬಳಿಕ ಪ್ರಜ್ವಲ್ ಬೆಂಗಳೂರಿಗೆ ಆಗಮಿಸಿದ್ದರು.
Advertisement