ಉತ್ತರಕಾಶಿ ಟ್ರೆಕ್ಕಿಂಗ್ ದುರಂತ: 5 ಚಾರಣಿಗರ ಮೃತದೇಹ ಬೆಂಗಳೂರಿಗೆ ಆಗಮನ
ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಮಂದಿ ಹವಾಮಾನ ವೈಪರಿತ್ಯದ ಕಾರಣ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೃತದೇಹಗಳು ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಈಗಾಗಲೇ ಮೃತ ಪದ್ಮಿನಿ ಹೆಗಡೆ, ವೆಂಕಟೇಶ್ ಪ್ರಸಾದ್ ಕೆ, ಆಶಾ ಎಂಬುವವರ ಮೃತದೇಹ ಏರ್ ಪೋರ್ಟ್ ಗೆ ಬಂದಿದ್ದು, ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರ ಮೃತದೇಹವನ್ನು ರವಾನಿಸಲಾಗಿದೆ.
ಇದೀಗ ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧೂ ವಾಕೇಕಾಲಮ್ ಎಂಬುವವರ ಮೃತದೇಹ ಆಗಮಸಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ಇದರೊಂದಿಗೆ ಈವರೆಗೆ ಐವರ ಮೃತದೇಹ ಆಗಮಿಸಿದ್ದು, ಇನ್ನೂ ನಾಲ್ವರ ಮೃತದೇಹ ದೆಹಲಿ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ರವಾನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ನಡುವೆ ಚಾರಣ ಆಯೋಜ ನಾಗೇಂದ್ರ ಅವರು ಮಾತನಾಡಿ, ಚಾರಣದ ವೇಳೆ ಯಾವುದೇ ಅವಘಡದಿಂದ 9 ಮಂದಿ ಸಾವನ್ನಪ್ಪಿಲ್ಲ, ಬದಲಾಗಿ ವಿಪರೀತ ಚಳಿ, ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ಮೃತದೇಹ ಬೆಂಗಳೂರಿಗೆ ಆಗಮಿಸಿರುವ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸತತ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಮೃತ 9 ಮಂದಿ ಚಾರಣಿಗರ ಪೈಕಿ ಐವರ ಮೃತದೇಹಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಉಳಿದ ನಾಲ್ಕು ಮೃತದೇಹಗಳು ಮುಂದಿನ ವಿಮಾನದಲ್ಲಿ ಬರಲಿವೆ. ಮೃತ ಚಾರಣಿಗರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ