
ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದರಲ್ಲಿ ಕಾರು ಕಾಲುವೆಗೆ ಬಿದ್ದು ಮೂವರು ಸಾವನ್ನಪ್ಪಿ, ಒಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿ ನಡೆದಿದೆ.
ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದ್ದು, ಇದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ. ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ.
ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶಿವಕುಮಾರ್ ಎಂಬುವವರು ಗಾಯಗೊಂಡಿದ್ದು, ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿಯೇ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದ್ದು, ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಕೊಂಡಿದೆ.
ಮಳೆಯಿಂದಾಗಿ ವಿದ್ಯುತ್ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ವಾಟದಹೊಸಹಳ್ಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಂತೆ ನಾಲ್ವರು ಅಧಿಕಾರಿಗಳು ಕಾರಿನಲ್ಲಿ ನಗರಗೆರೆಯಿಂದ ವಾಟದಹೊಸಹಳ್ಳಿ ಬರುತ್ತಿದ್ದರು. ನಗರಗೆರೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಬಿದ್ದಿದೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದ ಕಾರಿನಿಂದ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿದೆ. ಘಟನೆ ಬಳಿಕ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Advertisement