
ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ಎನ್‌ಇಟಿ)ಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ನೀಟ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಭಾರೀ ಅಕ್ರಮ ನಡೆದಿರುವ ಶಂಕೆ ವ್ಯಕ್ತಪಡಿಸಿದೆ. ಪರೀಕ್ಷೆ ಬರೆದ 24 ಲಕ್ಷ ಯುವಕರು ಮತ್ತು ಅವರ ಪೋಷಕರಿಗೆ ಉತ್ತರಿಸುವ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅವರ ಭವಿಷ್ಯವನ್ನು ನಾಶಮಾಡಲು ಸಿದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
"67 ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿ 720 ಕ್ಕೆ 720 ಅಂಕಗಳನ್ನು ಗಳಿಸಿದ್ದಾರೆ. ಹಿಂದಿನ ವರ್ಷಗಳ ಟಾಪರ್‌ಗಳ ಸಂಖ್ಯೆಗೆ ಹೋಲಿಸಿದರೆ, ಈ ವರ್ಷದ ಫಲಿತಾಂಶವು ಅನುಮಾನ ಹುಟ್ಟುಹಾಕುತ್ತಿದೆ. 2019 ಮತ್ತು 2020 ರಲ್ಲಿ, ಒಬ್ಬ ಅಭ್ಯರ್ಥಿ ಮಾತ್ರ ಪೂರ್ಣ ಅಂಕ ಗಳಿಸಿದ್ದರು; 2021 ರಲ್ಲಿ, ಮೂವರು; 2022 ರಲ್ಲಿ ಒಬ್ಬರು ಮತ್ತು 2023ರಲ್ಲಿ ಇಬ್ಬರು." ಈ ವರ್ಷ 67 ಟಾಪರ್‌ಗಳು ಹೊರಹೊಮ್ಮಿದ್ದಾರೆ. ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಶೇಕಡಾ 100 ಅಂಕ ಗಳಿಸುವುದು ಅನುಮಾನ ಹುಟ್ಟುಹಾಕಿದೆ.
ಈ ಬೆಳವಣಿಗೆ ಕಾಕತಾಳೀಯವೇ ಅಥವಾ ಅನಾಹುತವೇ ಎಂಬುದನ್ನು ನರೇಂದ್ರ ಮೋದಿ ಸರ್ಕಾರ ಸ್ಪಷ್ಟಪಡಿಸಬೇಕು' ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
67 ಟಾಪರ್‌ಗಳ ಪೈಕಿ 44 ಅಭ್ಯರ್ಥಿಗಳು ಗ್ರೇಸ್ ಮಾರ್ಕ್ಸ್‌ನಿಂದ ಉನ್ನತ ಅಂಕಗಳನ್ನು ಗಳಿಸಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಟಾಪರ್‌ಗಳಾದಾಗ, ಅಂಕಗಳ ಪ್ರಕ್ರಿಯೆ ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ.
62 ರಿಂದ 69 ರವರೆಗಿನ ನೋಂದಣಿ ಸಂಖ್ಯೆ ಹೊಂದಿರುವ ಟಾಪರ್‌ಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಅದೇ ಪರೀಕ್ಷಾ ಕೇಂದ್ರದವರು ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಅವರಲ್ಲಿ ಆರು ಮಂದಿ 720ಕ್ಕೆ 720 ಅಂಕಗಳನ್ನು ಪಡೆದರೆ, ಉಳಿದ ಇಬ್ಬರು ಅಭ್ಯರ್ಥಿಗಳು 718 ಮತ್ತು 719 ಅಂಕಗಳನ್ನು ಪಡೆದಿದ್ದಾರೆ. ಅಕ್ರಮಗಳು ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ನೊಂದ ಪರೀಕ್ಷಾರ್ಥಿಗಳಿಗೆ ನ್ಯಾಯ ದೊರಕಿಸಿಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
Advertisement