
ಬೆಂಗಳೂರು: ಜೂನ್ 4 ರಂದು ಉತ್ತರಾಖಂಡದ ಸಹಸ್ತ್ರತಾಲ್ ನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ರಾಜ್ಯದ 9 ಮಂದಿ ಕನ್ನಡಿಗರ ಪೈಕಿ ಪ್ರಸಾದ್ (53) ಕೂಡ ಒಬ್ಬರಾಗಿದ್ದು, ಇವರು ಸಹಸ್ತ್ರತಾಲ್ ಟ್ರೆಕ್ಕಿಂಗ್ ಬಳಿಕ ತಮಿಳುನಾಡಿನಲ್ಲಿ ಟ್ರೆಕ್ಕಿಂಗ್ ಹೋಗಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಪ್ರಸಾದ್ ಇಂಪೆಲ್ಸಿಸ್‌ನ ಡೆಲಿವರಿ ಅಶ್ಯೂರೆನ್ಸ್‌ನ ನಿರ್ದೇಶಕರಾಗಿದ್ದರು. ಮೊದಲು ವಿಪ್ರೋ ಜೊತೆ ಕೆಲಸ ಮಾಡಿದ್ದ ಇವರು ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾಗಿದ್ದರು.
ದುರಂತದಲ್ಲಿ ಮೃತಪಟ್ಟ 9 ಮಂದಿಯ ಮೃತದೇಹಗಳನ್ನು ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ವಿವಿಧ ವಾಣಿಜ್ಯ ವಿಮಾನಗಳಲ್ಲಿ ಬೆಂಗಳೂರಿಗೆ ತರಲಾಯಿತು. ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದರು.
ಪ್ರಸಾದ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕಚೇರಿಯಲ್ಲಿದ್ದ ಎಲ್ಲರೂ ಆಘಾತಗೊಂಡರು. ಪ್ರಸಾದ್ ಅವರ ಕುಟುಂಬದವರನ್ನು ಹೇಗೆ ಸಮಾಧಾನಪಡಿಸುವುದು ಅರ್ಥವಾಗದಂತಾಯಿತು. ಪ್ರಸಾದ್ ಪುತ್ರ-ಪುತ್ರಿ ಹಾಗೂ ತಾಯಿಯನ್ನು ಅಗಲಿದ್ದಾರೆ. ಅವರ ಮಗ 10ನೇ ತರಗತಿ ಓದುತ್ತಿದ್ದಾನೆ. ಇದೀಗ ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಅವರ ಕುಟುಂಬಕ್ಕೆ ಬೆಂಬಲಿಸಲು ನಿರ್ಧರಿಸಿದ್ದೇವೆಂದು ಪ್ರಸಾದ್ ಅವರ ಸ್ನೇಹಿತ ಹೇಳಿದ್ದಾರೆ.
ಸಹಸ್ತ್ರತಾಲ್ ಗೆ ಹೋದ ಬಳಿಕ ವಾಟ್ಸಾಪ್ ನಲ್ಲಿ ಮಾತುಕತೆ ನಡೆದಿತ್ತು. ಅವರೊಂದಿಗೆ ನಡೆಸಿದ ಈ ಕೊನೆಯ ಸಂಭಾಷಣೆಯನ್ನು ಪದೇ ಪದೇ ಓದಬೇಕೆನಿಸುತ್ತಿದೆ ಎಂದು ಮತ್ತೊಬ್ಬ ಸಹೋದ್ಯೋಗಿ ಕಣ್ಣೀರಿಟ್ಟಿದ್ದಾರೆ.
ನಾನು ಮತ್ತು ಪ್ರಸಾದ್ ಇಬ್ಬರು ಫಿಟ್‌ನೆಸ್ ಅಪ್ಲಿಕೇಶನ್ ಅನುಸರಿಸುತ್ತಿದ್ದೆವು. ಪ್ರಸಾದ್ ಅವರು ಸಹಸ್ತ್ರ ತಾಲ್‌ನಲ್ಲಿ 2ನೇ ದಿನದಂದು 492 ಮೀಟರ್ ಎತ್ತರದಲ್ಲಿ 3.38 ಕಿಮೀ ನಡೆದಿರುವುದನ್ನು ಹಂಚಿಕೊಂಡಿದ್ದರು. ನನ್ನ ಗುರಿ ತಿಂಗಳಿಗೆ 60 ಕಿಮೀ ಸೈಕ್ಲಿಂಗ್ ಆಗಿದ್ದರೆ, ಅವನ ಗುರಿ ತಿಂಗಳಿಗೆ 100 ಕಿಮೀ ವಾಕಿಂಗ್ ಆಗಿತ್ತು. ಆತ ಅತ್ಯಂತ ಅನುಭವಿ ಚಾರಣಿಗನಾಗಿದ್ದ. ಹೊರಾಂಗಣ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಇತರರಿಗೆ ಪ್ರೇರಣೆ ನೀಡುತ್ತಿದ್ದ. ಪ್ರಸಾದ್ ಜೊತೆಯಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗಿಯಾಗಲು ಯಾವಾಗಲೂ ವಾರಾಂತ್ಯ ಹಾಗೂ ರಜೆಗಾಗಿ ಎದುರು ನೋಡುತ್ತಿದ್ದೆವು ಎಂದು ಪ್ರಸಾದ್ ಅವರ ಸಹೋದ್ಯೋಗಿ ಪ್ರವೀಣ್ ಅವರು ಹೇಳಿದ್ದಾರೆ.
Advertisement