
ಕೋಲಾರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ರಾಜ್ಯ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರ್ಪಡೆಯಾಗುವುದು ಖಚಿತ ಎಂದು ಕೋಲಾರ ಸಂಸದರಾಗಿ ನೂತನವಾಗಿ ಆಯ್ಕೆಯಾಗಿರುವ ಎಂ.ಮಲ್ಲೇಶ್ ಬಾಬು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು ಕೋಲಾರದಿಂದ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆವಿ ಗೌತಮ್ ಅವರನ್ನು 71,388 ಮತಗಳಿಂದ ಸೋಲಿಸಿದ್ದಾರೆ.
ಕೇಂದ್ರದಲ್ಲಿ ಇಂದು ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಲ್ಲೇಶ್ ಬಾಬು ಅವರು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.
ಎರಡು ಬಾರಿ ಕರ್ನಾಟಕದ ಸಿಎಂ ಆಗಿ ಅಪಾರ ಅನುಭವ ಹೊಂದಿರುವ ಕುಮಾರಸ್ವಾಮಿ ಅವರು, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಆಸಕ್ತಿ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಇವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದರೆ ಇಡೀ ದೇಶಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸಿಎಂ ಆಗಿ ಎಸ್‌ಸಿ, ಎಸ್‌ಟಿ, ರೈತರು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕುಮಾರಸ್ವಾಮಿ ಶ್ರಮಿಸಿದ್ದರು. ಕುಮಾರಸ್ವಾಮಿ ಅವರು ಕೇಂದ್ರದ ಸಂಪುಟ ಸಚಿವರಾಗಿ ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸಲಿದ್ದಾರೆಂದು ತಿಳಿಸಿದರು.
ಕೋಲಾರ ಕ್ಷೇತ್ರ ಕುರಿತು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಾಗಿ ತಿಳಿಸಿದರು.
ನನ್ನ ಕ್ಷೇತ್ರದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋಲಾರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಸ್ಥಗಿತಗೊಂಡಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್) ಕುರಿತು ಮಾತನಾಡಿ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕೇಂದ್ರದಲ್ಲಿ ಸರ್ಕಾರ ರಚನೆಯಾದ ನಂತರ ಗಣಿಗಾರಿಕೆಯನ್ನು ಪ್ರಾರಂಭಿಸುವ ಕುರಿತು ಸರ್ಕಾರಕ್ಕೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಕೋಲಾರದ ಎಲ್ಲಾ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಗಮನ ಹರಿಸಲಾಗುವುದು ಮತ್ತು ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗೊಳಿಸಲಾಗುವುದು ಎಂದು ತಿಳಿಸಿದರು.
ಕೆಜಿಎಫ್ ಮತ್ತು ಬೆಂಗಳೂರು ನಡುವೆ ಹೆಚ್ಚುವರಿ ರೈಲುಗಳ ನಿಯೋಜನೆಗೆ ಹೊಸ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಇದಲ್ಲದೆ, ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳಉ ನನಗೆ ತಿಳಿದಿದೆ. ಈ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು ಎಂದು ಹೇಳಿದರು.
Advertisement