BBMP ವಲಯದ ಎಲ್ಲಾ ಪಾರ್ಕ್ ಗಳು ಇನ್ಮುಂದೆ ದಿನಪೂರ್ತಿ ಸಾರ್ವಜನಿಕರಿಗೆ ಮುಕ್ತ: ಡಿಸಿಎಂ ಆದೇಶ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಸರಹದ್ದಿನಲ್ಲಿರುವ ಎಲ್ಲಾ ಪಾರ್ಕ್ ಗಳು ಇನ್ನು ಮುಂದೆ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಈ ಸಂಬಂಧ ಆದೇಶ ಹೊರಡಿಸಿರುವ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು ಉದ್ಯಾನವನದಲ್ಲಿ ಹೆಚ್ಚಿನ ಭದ್ರತೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಬೆಂಗಳೂರಿನ ಎಲ್ಲಾ 1,200 ನೆರೆಹೊರೆಯ ಉದ್ಯಾನವನಗಳು ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ. ಈ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯ ಉದ್ಯಾನವನಗಳು ಮಧ್ಯಾಹ್ನದಿಂದ ಸಂಜೆ 5 ಗಂಟೆಯವರೆಗೆ ಮುಚ್ಚಿರುತ್ತಿದ್ದವು.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.
ಇನ್ನು ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್ ಗಳನ್ನು ತೆರವು ಮಾಡದಿರುವುದಕ್ಕೆ ಸಹಾಯಕ ಕಂದಾಯ ಅಧಿಕಾರಿ(ARO) ವಿರುದ್ಧ ಕೇಸು ದಾಖಲಿಸುವಂತೆ ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್ ಅವರಿಗೆ ಉಪ ಮುಖ್ಯಮಂತ್ರಿಗಳು ಸೂಚಿಸಿದರು.


