
ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ಪೊಲೀಸ್ ಕೇಸ್, ವಿವಾದಗಳು ಹೊಸದಲ್ಲ. ಆದರೆ ಕೊಲೆ ಪ್ರಕರಣದಲ್ಲಿ ಅವರು ಭಾಗಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಎಂಬ 33 ವರ್ಷ ವಯಸ್ಸಿನ ಯುವಕನ ಕೊಲೆ ಪ್ರಕರಣದ ಆರೋಪ ಈಗ ಅವರ ಮೇಲೆ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ, ರಾಜ್ಯದ ಈಗಿನ ಸಿನಿಮಾ ನಟರ ಪೈಕಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅನೇಕ ವಿವಾದಗಳನ್ನು ಎದುರಿಸುತ್ತ ಬಂದಿದ್ದಾರೆ.
ಕನ್ನಡದ ಹಿರಿಯ ನಟ ದಿ. ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಖ್ಯಾತಿಯ ಜೊತೆಗೆ ವಿವಾದಗಳ ಸರಮಾಲೆಯನ್ನೂ ಹೊತ್ತುಬಂದಿದ್ದಾರೆ. ದರ್ಶನ್ ಸುತ್ತ ಕೇಳಿ ಬಂದ ವಿವಾದಗಳ ಮಾಹಿತಿ ಇಲ್ಲಿದೆ...
ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಅನುಭವಿಸಿದ್ದ ನಟ
ನಟ ದರ್ಶನ್ ಅವರ ಕೌಟುಂಬಿಕ ಕಲಹ ವಿಚಾರ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. 2011 ರ ಸೆ.8 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ಅವರ ಪತ್ನಿ ಠಾಣೆಗೆ ದೂರು ನೀಡಿದ್ದರು. ಬಳಿಕ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರು. ನಟ ದರ್ಶನ್ 28 ದಿನಗಳ ಕಾಲ ಜೈಲಿನಲ್ಲಿದ್ದರು. ಈ ಪ್ರಕರಣದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. ಆ ಬಳಿಕ ಪ್ರಕರಣ ರಾಜಿ ಸಂಧಾನ ಮೂಲಕ ಸುಖಾಂತ್ಯ ಕಂಡಿತ್ತು.
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ
ಫೆಬ್ರವರಿ 16, 2020 ರಂದು ಅವರ 43 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಲಗತ್ತಿಸಲಾದ 26 ವರ್ಷದ ಪೊಲೀಸ್ ಪೇದೆ ದೇವರಾಜ್ ಡಿಆರ್ ಅವರು, ದರ್ಶನ್ ಅವರ ನಿವಾಸದಲ್ಲಿ ಜನಸಂದಣಿಯನ್ನು ನಿರ್ವಹಿಸುತ್ತಿದ್ದರು. ಈ ವೇಳೆ ದರ್ಶನ್ ಅವರ ಅಭಿಮಾನಿಗಳು ಪೇದೆ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ತನ್ನ ಅಭಿಮಾನಿಗಳ ಅಶಿಸ್ತಿನ ವರ್ತನೆಗೆಯಿಂದಾಗಿ ದರ್ಶನ್ ಅವರು ಟೀಕೆಗಳನ್ನು ಎದುರಿಸಬೇಕಾಯಿತು.
ಮಹಿಳೆ ಮೇಲೆ ದರ್ಶನ್ ನಾಯಿ ದಾಳಿ
ಮಹಿಳೆಯೊಬ್ಬರು ದರ್ಶನ್ ಅವರ ಮನೆಯ ನಾಯಿ ತನ್ನ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಕಾರ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಅಮಿತಾ ಹಾಗೂ ದರ್ಶನ್ ಮನೆಯ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಆಕೆಯ ಮೇಲೆ ನಾಯಿ ದಾಳಿ ನಡೆಸಿದೆ ಎಂದು ಆರೋಪಿಸಿ ದೂರು ನೀಡಿದ್ದರು. ದರ್ಶನ್ ಹಾಗೂ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು.
ಹುಲಿ ಉಗುರು ಪ್ರಕರಣ
ಬಿಗ್ ಬಾಸ್ ಸ್ಪರ್ಧಿ ಹುಲಿ ಉಗುರು ಧರಿಸಿದ್ದ ಪ್ರಕರಣದ ಬಳಿಕ ಅನೇಕ ಸೆಲೆಬ್ರಿಟಿಗಳ ಹೆಸರು ಕೂಡ ಹುಲಿ ಉಗುರಿನ ವಿಚಾರದಲ್ಲಿ ಕೇಳಿ ಬಂದಿತ್ತು. ನಟ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪೋಟೋ ವೈರಲ್ ಆಗಿತ್ತು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಮನೆಯಲ್ಲಿ ಶೋಧ ನಡೆಸಿದ್ದರು. 8 ಹುಲಿ ಉಗುರಿನ ಪೆಂಡೆಂಟ್ ದರ್ಶನ್ ಮನೆಯಲ್ಲಿ ಸಿಕ್ಕಿದ್ದವು. ಆದರೆ ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವುದು ತಿಳಿದುಬಂದಿತ್ತು.
ಫಾರ್ಮ್ ಹೌಸ್ ಮೇಲೆ ದಾಳಿ
ನಟ ದರ್ಶನ್ ಪ್ರಾಣಿಪ್ರಿಯ ವ್ಯಕ್ತಿ. ತನ್ನ ಫಾರ್ಮ್ ಹೌಸ್ ನಲ್ಲಿ ಅವರು ಅನೇಕ ಪ್ರಭೇದ ಪ್ರಾಣಿ – ಪಕ್ಷಿಗಳನ್ನು ಸಾಕಿದ್ದಾರೆ. ಇದರಲ್ಲಿ ಬಾರ್ ಹೆಡೆಡ್ ಗೂಸ್ ಎಂಬ ವಿಶಿಷ್ಟ ಪ್ರಭೇದದ ಬಾತುಕೋಳಿ ಇತ್ತು. ಇದನ್ನು ಸಾಕಲು ಅನುಮತಿಯಿಲ್ಲಚ ಹಾಗಾಗಿ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಆ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾದ ಕಾರಣ ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು.
ಮಾಧ್ಯಮಗಳ ಮೇಲೆ ಗರಂ ಆಗಿದ್ದ ದರ್ಶನ್
ನಟ ದರ್ಶನ್ ಕೆಲವೊಮ್ಮೆ ಮಾತಿನ ಭರದಲ್ಲಿ ಏನೋ ಹೇಳಿ ಬಿಡುತ್ತಾರೆ. ಅಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕೆಲ ಮಾಧ್ಯಮಗಳು ದರ್ಶನ್ ಅವರ ಯಾವುದೇ ಸುದ್ದಿಯನ್ನು ಹಾಕಲು ನಿರ್ಬಂಧ ಹೇರಿತ್ತು. ಕೆಲ ಸಮಯದ ಬಳಿಕ ದರ್ಶನ್ ಮಾಧ್ಯಮ ಮಿತ್ರರಿಗೆ ಕ್ಷಮೆಯಾಚಿಸಿದ್ದರು.
ʼಪುಡುಂಗಾʼ ವಿವಾದ
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ನಿರ್ದೇಶಕ ಪ್ರೇಮ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? ‘ಕರಿಯ’ದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ” ಎಂದು ಹೇಳಿದ್ದರು. ಈ ಹೇಳಿಗೆ ವಿವಾದ ಸೃಷ್ಟಿಸಿತ್ತು.
ʼರಾಬರ್ಟ್ʼ ನಿರ್ಮಾಪಕ ಉಮಾಪತಿ ಜೊತೆಗಿನ ವಿವಾದ
ʼರಾಬರ್ಟ್ʼ ಸಿನಿಮಾದ ಕೆಲ ಸಮಯದ ಬಳಿಕ ನಿರ್ಮಾಪಕ ಉಮಾಪತಿ ಅವರೊಂದಿಗೆ ವಿವಾದ ಹುಟ್ಟಿಕೊಂಡಿತ್ತು. ದರ್ಶನ್ ಹೆಸರು ಹೇಳಿಕೊಂಡು ಉಮಾಪತಿ 25 ಕೋಟಿ ವಂಚನೆಗೆ ಯತ್ನಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಆ ಬಳಿಕ ಇಬ್ಬರ ನಡುವೆ ʼಕಾಟೇರʼ ಟೈಟಲ್ ವಿಚಾರವಾಗಿ ವಿವಾದ ಉಂಟಾಗಿತ್ತು. ದರ್ಶನ್ ವೇದಿಕೆಯಲ್ಲಿ ʼತಗಡೇʼ ಎಂದು ಉಮಾಪತಿಗೆ ಗೌಡರಿಗೆ ಹೇಳಿದ್ದು ವಿವಾದ ಹುಟ್ಟು ಹಾಕಿತ್ತು.
ಅವಧಿ ಮೀರಿ ಪಾರ್ಟಿ
ʼಕಾಟೇರʼ ಸಿನಿಮಾದ ವೇಳೆ ಚಿತ್ರತಂಡ ಜೆಟ್ ಲ್ಯಾಗ್ ಪಬ್ ನಲ್ಲಿ ಒಟ್ಟಿಗೆ ಸೇರಿ ಊಟ ಮಾಡಿತ್ತು. ಈ ವೇಳೆ ಅವಧಿ ನಟ ದರ್ಶನ್ ಹಾಗೂ ಇತರರು ಸೇರಿ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ದರ್ಶನ್, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಮೊದಲಾದವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಲ್ಲಿ ‘ಊಟ ಮಾಡಿದ್ದೇವೆ ಅಷ್ಟೆ, ಪಾರ್ಟಿ ಮಾಡಿಲ್ಲ’ ಎಂದಿದ್ದರು.
ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ಇನ್ನು ನಟ ದರ್ಶನ್ ಹೊಟೇಲ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಮೈಸೂರಿನ ಖಾಸಗಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಗಳನ್ನು ಮಾಡಿದ್ದರು. ದರ್ಶನ್ ಹಾಗೂ ಸ್ನೇಹಿತರು ಪಾರ್ಟಿ ಮಾಡಿ, ಸಪ್ಲೆಯರ್ ಗಂಗಾಧರ್ ಎಂಬವರ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದರು. ಇದಾದ ಬಳಿಕ ಇದಕ್ಕೆ ದರ್ಶನ್ ತಿರುಗೇಟು ನೀಡಿದ್ದರು.
Advertisement