
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರ ಆಪ್ತ ನಾಗರಾಜ್ ಸೇರಿದಂತೆ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಲ್ಲಿ ದರ್ಶನ್ ಅವರ ಫಾರ್ಮ್ ಹೌಸ್ ಸೇರಿದಂತೆ ಅವರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ನಾಗರಾಜ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರ್ಶನ್, ಆತನ ಸ್ನೇಹಿತೆ ಹಾಗೂ ನಟಿ ಪವಿತ್ರಾ ಗೌಡ ಮತ್ತಿತರ 11 ಮಂದಿಯನ್ನು ಪೊಲೀಸರು ಬಂಧಿಸಿದಾಗಿನಿಂದ ನಾಗರಾಜ್ ಪರಾರಿಯಾಗಿದ್ದ. ಮತ್ತೋರ್ವ ಪ್ರದೋಶ್ ಎನ್ನಲಾಗಿದೆ. ಕೊಲೆಯಲ್ಲಿ ಈತ ಪಾತ್ರದ ಬಗ್ಗೆ ವಿವರಗಳನ್ನು ಮೂಲಗಳು ಬಹಿರಂಗಪಡಿಸಿಲ್ಲ. ದರ್ಶನ್ ನಾಯಕ ನಟರಾಗಿದ್ದ ಕೆಲವು ಸಿನಿಮಾಗಳಲ್ಲಿ ಪ್ರದೋಶ್ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ರವಿ ಎಂದು ಗುರುತಿಸಲಾದ ಮತ್ತೋರ್ವ ಗುರುವಾರ ಸಂಜೆ ಡಿವೈಎಸ್ ಪಿ ಮುಂದೆ ಶರಣಾಗಿದ್ದಾನೆ. ಈತ ಚಿತ್ರದುರ್ಗ ಜಿಲ್ಲಾ ಕೇಂದ್ರದ ಕುರುಬರಹಟ್ಟಿ ನಿವಾಸಿಯಾಗಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿದೆ. ಜೂನ್ 8 ರಂದು ರಾತ್ರಿ ಪವಿತ್ರಾಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ದರ್ಶನ್ ಮತ್ತು ಆತನ ತಂಡವನ್ನು ಬಂಧಿಸಲಾಗಿದೆ.
Advertisement