ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಳ್ಳಾರಿ ಮಾಡ್ಯೂಲ್ ಕೇಸ್: 7 ಶಂಕಿತ ಉಗ್ರರ ವಿರುದ್ಧ NIA ಚಾರ್ಜ್‌ಶೀಟ್, ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಸಂಚು!

ದೇಶದಲ್ಲಿ ಇಸಿಸ್ ಕಾರ್ಯಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಬಳ್ಳಾರಿ ಮಾಡ್ಯೂಲ್ ಪ್ರಕರಣದ 7 ಮಂದಿ ಶಂಕಿತರ ವಿರುದ್ಧ ಎನ್‌ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
Published on

ಬೆಂಗಳೂರು: ದೇಶದಲ್ಲಿ ಇಸಿಸ್ ಕಾರ್ಯಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಬಳ್ಳಾರಿ ಮಾಡ್ಯೂಲ್ ಪ್ರಕರಣದ 7 ಮಂದಿ ಶಂಕಿತರ ವಿರುದ್ಧ ಎನ್‌ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಸುಲೈಮಾನ್ ಅಲಿಯಾಸ್ ಮಿನಾಜ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀರ್ ಎಂ.ಡಿ.ಮಜಾಮಿಲ್, ಮಹಾರಾಷ್ಟ್ರದ ಅನಾಸ್ ಇಕ್ಬಾಲ್ ಶೇಖ್ ಮೊಹಮ್ಮದ್, ಜಾರ್ಖಂಡ್‌ನ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ಆರೋಪಿತರ ವಿರುದ್ಧ ಐಪಿಸಿ, ಯುಎಪಿಎ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎನ್‌ಐಎ ಈಗ ಚಾರ್ಜ್‌ಶೀಟ್ ಸಲ್ಲಿಸಿದೆ.

ಐಸಿಸ್ ಪ್ರತ್ಯೇಕತಾವಾದಿ ಮತ್ತು ಹಿಂಸಾತ್ಮಕ ಸಿದ್ಧಾಂತದಿಂದ ಪ್ರೇರಿತರಾಗಿದ್ದ ಆರೋಪಿಗಳು 2025ರ ವೇಳೆಗೆ ದೇಶದ ಪ್ರತೀ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್ ಸಿದ್ಧಪಡಿಸುವ ಗುರಿ ಹೊಂದಿದ್ದರು. ಭಾರತೀಯ ಸೈನಿಕರು, ಪೊಲೀಸರು, ನಿರ್ದಿಷ್ಟ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸಲು ಚಿಂತನೆ ನಡೆಸಿದ್ದರು.

ಸಂಗ್ರಹ ಚಿತ್ರ
ಸ್ಫೋಟ ಪ್ರಕರಣದಲ್ಲಿ ಬಂಧನ: ದುರ್ನಡತೆ ಆರೋಪ; ಎನ್ಐಎ ವಿರುದ್ಧ ಟಿಎಂಸಿ ನಾಯಕನ ಪತ್ನಿ ದೂರು; ತನಿಖಾ ಸಂಸ್ಥೆ ಪ್ರತಿಕ್ರಿಯೆ ಹೀಗಿದೆ...

ಬಳ್ಳಾರಿಯಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಇನ್ನು ಭಾರತ ಸರ್ಕಾರದ ವಿರುದ್ಧ ಜಿಹಾದ್, ಸ್ಫೋಟಗಳನ್ನು ನಡೆಸಲು ಸಿದ್ಧವಾಗಿದ್ದರು. ಜಿಹಾದ್ ಸಂಬಂಧಿತ ಡಿಜಿಟಲ್ ದಾಖಲೆಗಳು ಅಥವಾ ಡೇಟಾವನ್ನು ಇತರೆ ಯುವಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಆರೋಪಿಗಳ ಪೈಕಿ ಎಂ.ಡಿ ಸುಲೈಮಾನನಿಂದ ಇತರ ಆರೋಪಿಗಳು ’ಬಯಾತ್’ (ನಿಷ್ಠೆಯ ಪ್ರತಿಜ್ಞೆ) ಸ್ವೀಕರಿಸಿದ್ದರು. ಈತ ತನ್ನನ್ನು ಆರೋಪಿಗಳ ಗುಂಪಿನ ಅಮೀರ್ ಎಂದು ಘೋಷಿಸಿಕೊಂಡಿದ್ದ. ಡಿ.2023ರಲ್ಲಿ ಪ್ರಕರಣ ದಾಖಲಿಸಿಕೊಂಡು ದೇಶದಾದ್ಯಂತ ಎನ್ಐಎ ದಾಳಿ ನಡೆಸಿತ್ತು. ಆ ವೇಳೆ 7 ಜನ ಸಿಕ್ಕಿ ಬಿದ್ದಿದ್ದರು ಎಂದು ತಿಳಿದು ಬಂದಿದೆ.

ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಕರ್ನಾಟಕದಲ್ಲಿ ಬಂಧಿನಕ್ಕೊಳಗಾಗಿದ್ದ ಮೊಹಮ್ಮದ್‌ ಮುನಿರುದ್ದೀನ್‌, ಸೈಯದ್‌ ಅಮೀರ್‌, ಎಂ.ಡಿ.ಮುಜಮಿಲ್‌ ಹಾಗೂ ಮಹಾರಾಷ್ಟ್ರದ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಉಗ್ರರ ಜಾಲವು ದೇಶದ ಪ್ರತಿ ಜಿಲ್ಲೆಯಲ್ಲೂ ಯುವಕರನ್ನು ಐಸಿಎಸ್‌ ಉಗ್ರ ಸಂಘಟನೆಗೆ ನೇಮಿಸುವ ಉದ್ದೇಶ ಹೊಂದಿತ್ತು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಯುವಕರನ್ನು ಸ್ಲೀಪರ್‌ಸೆಲ್‌ಗಳನ್ನಾಗಿ ನೇಮಕ ಮಾಡಿಕೊಂಡು, 2025ರ ವೇಳೆ ದೇಶಾದ್ಯಂತ ಐಸಿಸ್‌ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಬಳ್ಳಾರಿಯ ಮೂವರು ಹಾಗೂ ಮಹಾರಾಷ್ಟ್ರದ ನಾಲ್ವರು ಶಂಕಿತರು ಭಾರೀ ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಚಾರ್ಜ್‌ಶೀಟ್‌ ಅನ್ನು ಎನ್‌ಐಎ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಸಂಗ್ರಹ ಚಿತ್ರ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು, ಶಿವಮೊಗ್ಗದಲ್ಲಿ ಎನ್ಐಎ ಅಧಿಕಾರಿಗಳ ದಾಳಿ

ಐಸಿಸ್‌ ಉಗ್ರ ಸಂಘಟನೆಯ ಸುಲೇಮಾನ್‌ ಅಲಿಯಾಸ್‌ ಮಿನಾಜ್‌ ಎಂಬಾತನಿಂದ 7 ಉಗ್ರರು ಪ್ರತಿಜ್ಞೆ ಪಡೆದುಕೊಂಡಿದ್ದರು. ಭಾರತದಾದ್ಯಂತ ಐಸಿಸ್‌ ಜಾಲವನ್ನು ವಿಸ್ತರಿಸುವುದಾಗಿ ಇವರು ಪ್ರತಿಜ್ಞೆ ಸ್ವೀಕರಿಸಿದ್ದರು. ಐಸಿಸ್‌ ಉಗ್ರ ಸಂಘಟನೆಯ ಜೊತೆ ನಿರಂತರವಾಗಿ ಇವರು ಸಂಪರ್ಕದಲ್ಲಿದ್ದರು. ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಸಿ ಗೆರಿಲ್ಲಾ ಮಾದರಿಯ ದಾಳಿಗೆ ಷಡ್ಯಂತ್ರ ರೂಪಿಸಿದ್ದರು.

ಅಷ್ಟೇ ಅಲ್ಲ ಸುಧಾರಿತ ಸ್ಫೋಟಕ ಸಾಧನಗಳ ಮೂಲಕ ದಾಳಿ ನಡೆಸುವುದು, ಬಳ್ಳಾರಿಯನ್ನು ಉಗ್ರ ಸಂಘಟನೆಯ ಜಾಲದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಸೇರಿ ಹಲವು ಕುತಂತ್ರಗಳನ್ನು ಹೆಣೆದಿದ್ದರು. 2025ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಲೀಪರ್‌ಸೆಲ್‌ಗಳನ್ನು ನೇಮಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶ ಹೊಂದಿದ್ದರು ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ ಧಾರ್ಮಿಕ ಮುಖಂಡರು, ದೇಶದ ಯೋಧರು, ಪೊಲೀಸರು ಸೇರಿ ಹಲವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಇವರ ಬಳಿಯಿಂದ ಹಲವು ಡಿವೈಸ್‌ಗಳ ಜತೆಗೆ ಜಿಹಾದ್‌ ಕುರಿತ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com