
ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ದಸರಾ ಆನೆ ಅಶ್ವತ್ಥಾಮ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವುದು ಸೇರಿದಂತೆ ವನ್ಯಜೀವಿಗಳ ಅಸಹಜ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ. ಆನೆಗಳು ಮತ್ತು ಇತರ ವನ್ಯಜೀವಿಗಳ ಸುರಕ್ಷತೆ ಮತ್ತು ರಕ್ಷಣೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ಆನೆಗಳ ಅಸಹಜ ಸಾವಿನ ಕುರಿತಾದ ವರದಿಗಳನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠವು ಈ ಸಂಬಂಧ ಪಿಐಎಲ್ ದಾಖಲಿಸಿಕೊಂಡಿದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಱಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಲಿಖಿತ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದು, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.
'ಕರ್ನಾಟಕದಲ್ಲಿ ವಿದ್ಯುತ್ ಸ್ಪರ್ಶದಿಂದ ಅಥವಾ ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ವಿವಿಧ ಪ್ರದೇಶಗಳಲ್ಲಿ ಆನೆಗಳು ಸಾವಿಗೀಡಾಗುತ್ತಿರುವ ಸತತ ಮತ್ತು ಪುನರಾವರ್ತಿತ ಘಟನೆಗಳು ಚಿಂತಿಸಬೇಕಾದ ಗಂಭೀರ ವಿಷಯವಾಗಿದೆ. ನಿರ್ದಿಷ್ಟವಾಗಿ ಆನೆಗಳು ಮತ್ತು ವನ್ಯಜೀವಿಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವ ಉಸ್ತುವಾರಿ ವಹಿಸಿರುವ ಅಧಿಕಾರಿಗಳ ಶ್ರದ್ಧೆಯ ಕೊರತೆಯಿಂದ ಇಂತಹ ಘಟನೆಗಳು ಪದೇ ಪದೆ ಸಂಭವಿಸುತ್ತಿವೆ ಎಂದು ಮಾಧ್ಯಮಗಳ ವರದಿ ಪ್ರತಿಬಿಂಬಿಸುತ್ತದೆ' ಎಂದು ನ್ಯಾಯಾಲಯ ಹೇಳಿದೆ.
ಅಭಯಾರಣ್ಯದ ಒಳಗೆ ಅಥವಾ ಹೊರಗೆ, ಆನೆಗಳು ಮತ್ತು ಇತರ ವನ್ಯಜೀವಿಗಳ ಸುರಕ್ಷತೆಗೆ ಕಾಳಜಿ ವಹಿಸುವ ಅಗತ್ಯವಿದೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಅರಣ್ಯ ಮತ್ತು ಇತರ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ವಿದ್ಯುತ್ ಸ್ಪರ್ಶ ಅಥವಾ ಇತರ ಕಾರಣಗಳಿಗಾಗಿ ಅವುಗಳ ಅಸ್ವಾಭಾವಿಕ ಸಾವುಗಳನ್ನು ತಡೆಯಪಬೇಕು. ಆನೆಗಳು ಮತ್ತು ಎಲ್ಲ ವನ್ಯಜೀವಿಗಳು ಸುರಕ್ಷಿತ ವಾತಾವರಣದಲ್ಲಿ ವಾಸಿಸುವ ಹಕ್ಕನ್ನು ಹೊಂದಿವೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ಆನೆಗಳು ಸೇರಿದಂತೆ ಇತರೆ ವನ್ಯಜೀವಿಗಳ ಅಸ್ವಾಭಾವಿಕ ಸಾವುಗಳನ್ನು ತಡೆಯುವುದು ಮತ್ತು ಅವುಗಳಿಗೆ ಸುರಕ್ಷತೆ ಮತ್ತು ರಕ್ಷಣೆ ಒದಗಿಸಲು ಸದ್ಯ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಭವಿಷ್ಯದಲ್ಲಿ ಇಂತಹ ಅಸ್ವಾಭಾವಿಕ ಸಾವುಗಳನ್ನು ತಡೆಗಟ್ಟಲು ಕೈಗೊಳ್ಳಲು ಉದ್ದೇಶಿಸಲಾದ ಕ್ರಮಗಳೇನು? ಈ ರೀತಿಯ ಘಟನೆಗಳನ್ನು ತಡೆಯಲು ಅರಣ್ಯ ಇಲಾಖೆ ಅಳವಡಿಸಿಕೊಂಡಿರುವ ಕಾರ್ಯವಿಧಾನಗಳು ಯಾವುವು? ಈ ಸಾವುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಹೊಣೆಗಾರಿಕೆ ಏನು? ಎಂಬ ಐದು ಅಂಶಗಳ ಕುರಿತು ನ್ಯಾಯಾಲಯವು ಪ್ರತಿಕ್ರಿಯೆಯನ್ನು ಕೇಳಿದೆ.
Advertisement