
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಕುರಿತು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ್ ಮೋಹನ್ (83) ಹುಬ್ಬಳ್ಳಿಯಲ್ಲಿ ನಿಧನರಾದರು.
ಮದನ್ ಮೋಹನ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ವಿಮರ್ಶಾತ್ಮಕ ವಿಶ್ಲೇಷಣೆಯುಳ್ಳ ಲೇಖನಗಳ ಮೂಲಕ ಸರ್ಕಾರದ ಕಣ್ಣು ತೆರೆಸುತ್ತಿದ್ದ ಮದನ್ ಮೋಹನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಸಿದ್ದರಾಮಯ್ಯ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪತ್ರಕರ್ತರ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮತ್ತಿಹಳ್ಳಿ ಮದನ್ ಮೋಹನ್ ಅವರು ಪತ್ರಿಕೋದ್ಯಮದಲ್ಲಿ 47 ವರ್ಷ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವರದಿಗಾರನಾಗಿ ಕೆಲಸ ಆರಂಭಿಸಿದರು. ಮೂಲತಃ ಬಳ್ಳಾರಿಯ ಮದನ ಮೋಹನ ಅವರು, 1958ರಲ್ಲಿ ಹುಬ್ಬಳ್ಳಿಗೆ ಬಂದರು. ಬೆಳಗಾವಿ, ಗೋವಾ ಕೆಲಸ ಮಾಡಿದ ನಂತರ 1968ರಲ್ಲಿ ಮತ್ತೆ ಹುಬ್ಬಳ್ಳಿಗೆ ಬಂದು, ಉತ್ತರ ಕರ್ನಾಟದ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದರು.
ಅವರು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಒಳಗೊಂಡ ಲೇಖನ ಬರೆದಿದ್ದರು. ಅವರು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಕೆಲಸ ಮಾಡಿದರು ಮತ್ತು ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ.2005ರಲ್ಲಿ ನಿವೃತ್ತರಾದರು.
ಇಂಗ್ಲಿಷ್ ಭಾಷಾ ಪತ್ರಕರ್ತರಾದರೂ ಕನ್ನಡದಲ್ಲೂ ಬರೆಯುತ್ತಿದುದು ಅವರ ವಿಶೇಷತೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಅಧಿಕಾರ ವೀಕೇಂದ್ರಿಕರಣ, ಜಲಸಂಪನ್ಮೂಲ, ಪ್ರಾದೇಶಿಕ ಅಸಮಾನತೆಯ ನಿವಾರಣೆ ಅವರ ಆಯ್ಕೆಯ ವಿಷಯಗಳಾಗಿದ್ದವು. ವಸ್ತುನಿಷ್ಠ ವರದಿಗಾರಿಕೆಗೆ ಹೆಸರಾಗಿದ್ದರು. ನೀರಾವರಿ ಯೋಜನೆಗಳು, ಕೃಷ್ಣಾ ಜಲ ವಿವಾದದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು.
Advertisement