ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಮಹಿಳಾ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ; ಶೇ 10ರಷ್ಟು ಮೀಸಲಾತಿಗೆ ಶಿಫಾರಸು
ಬೆಂಗಳೂರು: 82 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಾಂಪ್ರದಾಯಿಕವಾಗಿ ಪುರುಷರೇ ಪ್ರಾಬಲ್ಯ ಹೊಂದಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿಶಾಮಕ ದಳಕ್ಕೆ ಮಹಿಳಾ ಸಿಬ್ಬಂದಿಯನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದರಂತೆ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿಯಲ್ಲಿ ಮಹಿಳೆಯರಿಗೆ ಕನಿಷ್ಠ ಶೇ 10ರಷ್ಟು ಮೀಸಲಾತಿ ನೀಡುವಂತೆ ಇಲಾಖೆ ಶಿಫಾರಸು ಮಾಡಿದೆ.
ಸದ್ಯ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪಾತ್ರವು ಡೆಸ್ಕ್ ಕೆಲಸಕ್ಕೆ ಸೀಮಿತವಾಗಿದ್ದು, ಅಗ್ನಿಶಾಮಕ ಸೇವೆಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯನ್ನು ಕಾರ್ಯಪಡೆಯಲ್ಲಿ ಸೇರಿಸುವುದು ಮಹತ್ವದ ಕ್ರಮವಾಗಿದೆ.
'ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ಬದಲಾಯಿಸುವ ಅಗತ್ಯವನ್ನು ನಾವು ಸರ್ಕಾರದ ಮುಂದಿಟ್ಟಿದ್ದೇವೆ. ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು. ಪುರುಷರು ಮತ್ತು ಮಹಿಳೆಯರ ಆಯ್ಕೆ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇಲಾಖೆಯು ಕಟ್ಟುನಿಟ್ಟಾದ ನೇಮಕಾತಿ ಮಾನದಂಡಗಳನ್ನು ನಿರ್ವಹಿಸುತ್ತದೆ. ನಮ್ಮ ಪ್ರಾಥಮಿಕ ಕಾಳಜಿ ಸಾರ್ವಜನಿಕ ಸುರಕ್ಷತೆಯಾಗಿದೆ. ಎಲ್ಲ ನೇಮಕಾತಿಗಳು ಲಿಂಗವನ್ನು ಲೆಕ್ಕಿಸದೆ ಇರಬೇಕು ಮತ್ತು ಮಾನದಂಡಗಳನ್ನು ಪೂರೈಸಬೇಕು' ಹಿರಿಯ ಐಪಿಎಲ್ ಅಧಿಕಾರಿ ಹೇಳಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಮಲ್ ಪಂತ್ ಅವರು ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, 'ಮಹಿಳೆಯರು ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ವಲಯಗಳಲ್ಲಿ ವಿವಿಧ ಸವಾಲಿನ ಪಾತ್ರಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಇದೀಗ ಅಗ್ನಿಶಾಮಕ ಸೇವೆಗಳಲ್ಲಿಯೂ ಅವರ ಸಾಮರ್ಥ್ಯವನ್ನು ನಾವು ಗುರುತಿಸುವ ಸಮಯ ಬಂದಿದೆ' ಎಂದು ಹೇಳಿದರು.
ಅಗ್ನಿಶಾಮಕ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿ, ಮಹಿಳಾ ಸಿಬ್ಬಂದಿಗೆ ವಾತಾವರಣವನ್ನು ಹೆಚ್ಚು ಅನುಕೂಲಕರವಾಗಿಸಲು ಸೌಲಭ್ಯಗಳು ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಯೋಜಿಸಲಾಗಿದೆ. ರಾಜ್ಯ ಸರ್ಕಾರವು ನಮ್ಮ ಪ್ರಸ್ತಾವನೆಯನ್ನು ಅನುಮೋದಿಸುತ್ತದೆ ಮತ್ತು ಮಹಿಳೆಯರಿಗೆ ಅಗ್ನಿಶಾಮಕ ಸಿಬ್ಬಂದಿಯಾಗಿ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ' ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ