ದರ್ಶನ್ ಗೆ ಸಂಕಷ್ಟ: ರಾಜಕಾಲುವೆ ಒತ್ತುವರಿ ಕೇಸ್‌ಗೆ ಮರುಜೀವ; ವೈದ್ಯಕೀಯ ಪರೀಕ್ಷೆ ಬೇಡ, ಮುಜುಗರ ಆಗುತ್ತೆ- ಪ್ರಜ್ವಲ್! ಇವು ಇಂದಿನ ಪ್ರಮುಖ ಸುದ್ದಿಗಳು 18-06-24

ದರ್ಶನ್ ಗೆ ಸಂಕಷ್ಟ: ರಾಜಕಾಲುವೆ ಒತ್ತುವರಿ ಕೇಸ್‌ಗೆ ಮರುಜೀವ; ವೈದ್ಯಕೀಯ ಪರೀಕ್ಷೆ ಬೇಡ, ಮುಜುಗರ ಆಗುತ್ತೆ- ಪ್ರಜ್ವಲ್! ಇವು ಇಂದಿನ ಪ್ರಮುಖ ಸುದ್ದಿಗಳು 18-06-24

1. ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ. ಭವಾನಿ ರೇವಣ್ಣಗೆ ಜಾಮೀನು

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ 42ನೇ ACMM ಕೋರ್ಟ್ ಜೂನ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅಧಿಕಾರಿಗಳು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಎಸ್ಐಟಿ ಮನವಿ ಮಾಡಿರುವುದ್ದಕ್ಕೆ ಪ್ರಜ್ವಲ್ ರೇವಣ್ಣ ನ್ಯಾಯಾಲಯದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಎರಡು ಕೇಸ್‌ನಲ್ಲಿ ಪುರುಷತ್ವ ಪರೀಕ್ಷೆ ನಡೆದಿದೆ ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದನ್ನು ಕೇಳಿ ನ್ಯಾಯಾಧೀಶರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪರಹರಿಸಿದ ಪ್ರಕರಣದಲ್ಲಿ ಹೈಕೋರ್ಟ್ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದೆ. ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

2. ರೇಣುಕಾಸ್ವಾಮಿ ಮನೆಗೆ ಬಿಜೆಪಿ ನಿಯೋಗ ಭೇಟಿ, ಸಾಂತ್ವನ.

ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಯದ ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಇಂದು ಭೇಟಿ ನೀಡಿ ಸಾಂತ್ವನ ಹೇಳಿದೆ. ಅಲ್ಲದೆ ಪಕ್ಷದ ವತಿಯಿಂದ ರೂ. 2 ಲಕ್ಷ ನೆರವು ನೀಡಿ, ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್, ತನಿಖೆಯ ವಿವರಗಳನ್ನು ನಾವು ಈಗಲೇ ಹೇಳಲು ಆಗುವುದಿಲ್ಲ. ಸ್ವಲ್ಪ ನಿರ್ಲಕ್ಷ್ಯವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು, ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಕರಣ ಹೊರಬಂದಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ತನಿಖೆ ಹಾದಿ ಸಾಗುತ್ತಿದೆ ಎಂದು ಹೇಳಿದರು.

3. ಜೆಲ್ಲಿ ಫಿಷ್ ಕುಟುಕು ಮೀನುಗಾರ ಸಾವು

ಕಾರವಾರ ಸಮೀಪದ ದೇವಬಾಗ್‌ನಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಜೆಲ್ಲಿ ಫಿಷ್ ಮೀನುಗಾರನಿಗೆ ಕುಟುಕಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಲೆಗೆ ಬಿದ್ದಿದ್ದ ಜೆಲ್ಲಿ ಫಿಷ್ ನನ್ನು ಮೀನುಗಾರ ಕೃಷ್ಣ ಬಲೆಯಿಂದ ತೆಗೆದು ಸಮುದ್ರಕ್ಕೆ ಎಸೆದಿದ್ದರು ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಹೇಳಿದ್ದಾರೆ. ಮೀನನ್ನು ಸಮುದ್ರಕ್ಕೆ ಎಸೆದ ಕೆಲ ನಿಮಿಷಗಳ ನಂತರ ಚರ್ಮದ ಮೇಲೆ ಮತ್ತು ಕಣ್ಣುಗಳಲ್ಲು ತೀವ್ರತರ ತುರಿಕೆ ಆರಂಭವಾಗಿತ್ತು. ಕೂಡಲೇ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಕೃಷ್ಣನನ್ನು ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

4. ದರ್ಶನ್ ಗೆ ಸಂಕಷ್ಟ: ರಾಜಾಕಾಲುವೆ ಒತ್ತುವರಿ ಕೇಸ್‌ ಗೆ ಮರುಜೀವ

ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲ್ಲೇ ನಟ ದರ್ಶನ್ ಗೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ರಾಜಾಕಾಲುವೆ ಒತ್ತುವರಿ ಕೇಸ್‌ ಕೂಡ ಮರುಜೀವಕೊಂಡಿದ್ದು, ರಾಜರಾಜೇಶ್ವರಿ ನಗರದಲ್ಲಿ ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಬಂಗಲೆಗೂ ಸಂಚಕಾರ ಬಂದಿದೆ. ಐಡಿಯಲ್‌ ಹೋಮ್ಸ್‌ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್‌ ಮನೆಯನ್ನು 2016ರಲ್ಲಿ ತೆರವುಗೊಳಿಸಲು ಬಿಬಿಎಂಪಿ ಮುಂದಾಗಿತ್ತು. ಆದರೆ ಅಂದು ಕೋರ್ಟ್ ನಿಂದ ಸ್ಟೇ ತಂದಿದ್ದರಿಂದ ದರ್ಶನ್ ಮನೆಯನ್ನು ಕೆಡವದೆ ಸುಮ್ಮನಾಗಿತ್ತು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿದ್ದರೂ ಸಹ ಕಾನೂನಿನ ಪ್ರಕಾರ ಮನೆ ತೆರವು ಮಾಡುವಂತೆ ಸೂಚಿಸಿದ್ದಾರೆ.

5. ಮಹಾರಾಣಿ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ಓದುತ್ತಿದ್ದ 19 ವರ್ಷದ ಪಾವನಾ ಮೃತ ವಿದ್ಯಾರ್ಥಿನಿ. ಪಾವನಾ ಡೆಟ್ ನೋಟ್ ಬರೆದಿಟ್ಟು ಜೂ.16ರಂದು ಹಾಸ್ಟೆಲ್ ರೂಂ‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಾವನಾ ಆನ್ ಲೈನ್ ಆ್ಯಪ್ನಲ್ಲಿ 15 ಸಾವಿರ ಹೂಡಿಕೆ‌ ಮಾಡಿದ್ದರು, ಆದರೆ, ಹೂಡಿಕೆ ಮಾಡಿದ ಹಣ ವಾಪಸ್ಸು ಬಂದಿಲ್ಲ ಎಂದು ಡೆಟ್ ನೋಟ್ ನಲ್ಲಿ ತಿಳಿಸಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com