
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ಸೋಮವಾರಕ್ಕೆ ಅಂತ್ಯ ಆಗಲಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಎರಡೆರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರೂ ಪೊಲೀಸರಿಗೆ ತಲೆ ಬಿಸಿ ತಪ್ಪಿಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಬಲ ಸಾಕ್ಷಿಗಳ ಸಂಗ್ರಹಕ್ಕೆ ಎಸ್‌ಐಟಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈವರೆಗೆ ಆರೋಪಿ ವಿರುದ್ಧದ ಎರಡು ಪ್ರಕರಣಗಳ ತನಿಖೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಎಸ್ಐಟಿ ತನಿಖೆ ಮುಗಿದ ಹಿನ್ನೆಲೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಸಿಐಡಿಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಮತ್ತೆ ಕಸ್ಟಡಿಗೆ ಪಡೆಯಲು ಎಸ್ಐಟಿ ಸಿದ್ಧತೆ ನಡೆಸಿದೆ.
ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಎಸ್‌ಐಟಿ (SIT) ಮನವಿ ಮಾಡಲಿದೆ. ಬಾಡಿ ವಾರೆಂಟ್ ಮೇಲೆ ಮತ್ತೆ ಪ್ರಜ್ವಲ್ ರೇವಣ್ಣರನ್ನು ಕಸ್ಟಡಿಗೆ ಪಡೆಯಲು ಎಸ್‌ಐಟಿ ಮುಂದಾಗಿದೆ. ಒಂದು ಪ್ರಕರಣ ಮುಗಿದ ಬೆನ್ನಲ್ಲೇ ಮತ್ತೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರತಿಯೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುವುದು. ಇದೀಗ ಮತ್ತೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
Advertisement