
ಸಂಡೂರು(ಬಳ್ಳಾರಿ): ಇಂದು ಜೂ.21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಭಾರತದ ದೇಶದ ಅತ್ಯಂತ ಪುರಾತಾನ ಯೋಗಾಭ್ಯಾಸವನ್ನು 10 ವರ್ಷಗಳಿಂದೀಚೆಗೆ ಜಾಗತಿಕ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ಜಿಂದಾಲ್‌ನ ಬಸವೇಶ್ವರ ನಗರದ ಆವರಣದಲ್ಲಿ ಮಾಡಿದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಸಚಿವ ಸಂತೋಷ ಲಾಡ್, ಸಂಸದ ತುಕಾರಾಂ, ನಟಿ ಶ್ರೀಲೀಲಾ ಭಾಗಿಯಾಗಿದ್ದರು.
ಯೋಗ ದಿನಾಚರಣೆ ಪ್ರಯುಕ್ತ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಭಾರತವು ಜಗತ್ತಿಗೆ ಪರಿಚಯಿಸಿದ ಅನನ್ಯ ಸಾಧನ ಯೋಗ. ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಸಾಧ್ಯ. ನಿತ್ಯ ಜೀವನಕ್ಕೆ ಬೇಕಿರುವ ಏಕಾಗ್ರತೆ, ಸಂಯಮ, ಒತ್ತಡ ನಿರ್ವಹಣೆಯ ಕೌಶಲ್ಯಗಳು ಯೋಗದಿಂದ ಲಭಿಸುತ್ತವೆ ಎಂದು ಬರೆದುಕೊಂಡಿದ್ದಾರೆ.
ಅವರು ನಿನ್ನೆ ಶ್ವಾಸಯೋಗ ಸಂಸ್ಥೆ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಆಯೋಜಿಸಿದ್ದ "ಯೋಗ ರತ್ನ-2024" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ್ದರು. ವರ್ಗರಹಿತ, ಜಾತಿ ರಹಿತ ಸಮ ಸಮಾಜದ ಮೌಲ್ಯವನ್ನು ಮನುಕುಲದಲ್ಲಿ ಬಿತ್ತಿದ ಬಸವ ತತ್ವವೇ ಶಾಶ್ವತವಾದದ್ದು. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದ್ದೆ.
ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿರುವ ಸ್ವಾಮೀಜಿಗಳು ಒಟ್ಟಾಗಿ ನನ್ನನ್ನು ಮತ್ತು ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಆಶೀರ್ವದಿಸಿದಕ್ಕಾಗಿ ಸ್ವಾಮೀಜಿಗಳ ಸಮೂಹಕ್ಕೆ ಧನ್ಯವಾದಗಳು ಎಂದು ಹೇಳಿದ್ದರು.
Advertisement