
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಆರೋಪಿಗಳ ಪೈಕಿ ನಾಲ್ವರನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಚಿತ್ರದುರ್ಗದಲ್ಲಿ ಮೆಡಿಕಲ್ ಸ್ಟೋರ್ ಉದ್ಯೋಗಿ 33 ವರ್ಷದ ರೇಣುಕಾಸ್ವಾಮಿ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಶರಣಾಗಿದ್ದ ನಾಲ್ವರು ಆರೋಪಿಗಳನ್ನು ಭದ್ರತೆಯ ಹಿನ್ನೆಲೆಯಲ್ಲಿ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ.
ಗಿರಿನಗರದ ವಿ ಕಾರ್ತಿಕ್ ಅಲಿಯಾಸ್ ಕಪ್ಪೆ (27) , ಗಿರಿನಗರದ ಆರ್ ಕೇಶವಮೂರ್ತಿ (27), ಬಿಜಿ ರಸ್ತೆಯ ನಿವಾಸಿ ಎಲ್ ನಿಖಿಲ್ ನಾಯಕ್ (21) ಮತ್ತು ಚಿತ್ರದುರ್ಗದ ರವಿಶಂಕರ್ ಅಲಿಯಾಸ್ ರವಿ (32) ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಕೋರ್ಟ್ ಆದೇಶ
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಹ ಆರೋಪಿಗಳು ಹಾಗೂ ದರ್ಶನ್ ಅವರ ಅಭಿಮಾನಿಗಳು ಹಲ್ಲೆ ನಡೆಸುವ ಸಾಧ್ಯತೆಗಳಿದ್ದು, ಆರೋಪಿಗಳಲ್ಲಿ ಕೆಲವರನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಧೀಶರಿಗೆ ಪ್ರಾಸಿಕ್ಯೂಷನ್ ಶನಿವಾರ ಮನವಿ ಮಾಡಿದೆ.
ನಾಲ್ವರು ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಧೀಶರು ಸೋಮವಾರ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಇಂದು ರಾತ್ರಿ ನಾಲ್ವರು ಆರೋಪಿಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಈ ಹಿಂದೆ ಹಣಕಾಸಿನ ವಿಚಾರದಲ್ಲಿ ಸಂತ್ರಸ್ತ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವುದಾಗಿ ನಾಲ್ವರು ಜೂನ್ 10 ರಂದು ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಶರಣಾಗಿದ್ದರು. ನಾಲ್ವರನ್ನು ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ ದರ್ಶನ್ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಈ ನಾಲ್ವರು ದರ್ಶನ್ ಹೆಸರನ್ನು ಬಹಿರಂಗಪಡಿಸಿರುವುದರಿಂದ ಜೈಲಿನಲ್ಲಿ ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement