
ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನ ಮೃತದೇಹವು ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಆಕಾಶ್ ಮಠಪತಿ (30)ಯವರ ಮೃತದೇಹ ಶನಿವಾರ ರಾತ್ರಿ ಕೆರೆ ದಡದಲ್ಲಿ ಪತ್ತೆಯಾಗಿದ್ದು, ಆಕಾಶ್ ನನ್ನು ಆತನ ಪತ್ನಿಯ ಕಡೆಯ ಸ್ನೇಹಿತರು ಮತ್ತು ಸಂಬಂಧಿಕರೇ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಕಾಶ್ ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯ ಕಾವ್ಯಾಳನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ.
ಪ್ರಕರಣ ಸಂಬಂಧ ಆಕಾಶ್ ಪೋಷಕರು ತಮ್ಮ ಸೊಸೆ ಹಾಗೂ ಆಕೆಯ ಪೋಷಕರು ಸೇರಿದಂತೆ 12 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದು, ಇದೂವರೆಗೆ 8 ಮಂದಿಯನ್ನು ಬಂಧನಕ್ಕೊಳಪಡಿಲಿದ್ದಾರೆ. ಆಕಾಶ್‌ನ ಮೈಮೇಲೆ ಸಣ್ಣ ಗಾಯವಾಗಿದ್ದು ಬಿಟ್ಟರೆ ಯಾವುದೇ ಗಂಭೀರ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಮೃತ ಆಕಾಶ್ ಹುಬ್ಬಳ್ಳಿಯ ಗೌಕ್ ರಸ್ತೆಯ ಲೋಹಿಯಾ ನಗರದ ಕೆರೆಯೊಂದರ ಬಳಿ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾನೆಂದೂ ಮಾಹಿತಿ ನೀಡಿದ್ದಾರೆ.
ಆಕಾಶ್ ತಂದೆ ಶೇಕರಯ್ಯ ಮಾತನಾಡಿ, ಮಗನ ಸಾವಿಗೆ ಆಕಾಶ್ ಪತ್ನಿಯ ಕುಟುಂಬದವರೇ ಕಾರಣ. ನಾನು ಸಾಮಾಜಿಕ ಕಾರ್ಯದ ಹಿನ್ನೆಲೆಯಿಂದ ಬಂದವನು. ನನ್ನ ಜೀವನಕ್ಕಾಗಿ ನಾನು ಆಟೋ ಓಡಿಸುತ್ತೇನೆ. ನನ್ನ ಮಗ ತನ್ನ ಪತ್ನಿ ಕಾವ್ಯಾ ಮತ್ತು ಆಕೆಯ ಸಹೋದರ ಭರತ್ ನಾಯಕ್ ಅವರೊಂದಿಗೆ ಮನಸ್ತಾಪ ಹೊಂದಿದ್ದ, ಆಕೆಯ ಕುಟುಂಬದವರು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದೆ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದರು. ಬಳಿಕ ಮುರುಡೇಶ್ವರಕ್ಕೆ ಪಲಾಯನವಾಗಿದ್ದರು. ನನ್ನ ಮಗನಿಗೆ ಪೋಷಕರಿಂದ ಹಣ ಕೊಡಿಸುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ನಾವೂ ಬೇಸತ್ತಿದ್ದೆವು. ಕಳೆದ ತಿಂಗಳ ಹಿಂದೆ ನಾವು ನಮ್ಮ ಮಗನನ್ನು ಮನೆಗೆ ಕರೆಸಿಕೊಂಡಿದ್ದವು. ಅಂದಿನಿಂದ ಅವರ ಕುಟುಂಬ ಸದಸ್ಯರು ಆಕಾಶ್ ಮೇಲೆ ಕೋಪಗೊಂಡಿದ್ದರು.
ಆರು ತಿಂಗಳ ಹಿಂದೆ ಕಾವ್ಯಾಳ ಕುಟುಂಬಸ್ಥರು ಸಣ್ಣ ವಿಚಾರಕ್ಕೆ ಆಕಾಶ್ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಕಾವ್ಯಾಳ ಕುಟುಂಬದ ಇಬ್ಬರನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ನಾನು ಮತ್ತು ನನ್ನ ಹೆಂಡತಿ ಪೊಲೀಸರಿಗೆ ಪ್ರಕರಣ ದಾಖಲಿಸದಂತೆ ಮನವಿ ಮಾಡಿಕೊಂಡಿದ್ದೆವು. ನನ್ನ ಮಗನಿಂದ ದೂರವಿರಲು ಅವರಿಗೆ ಸಲಹೆ ನೀಡಿದ್ದೆವು. ನಮ್ಮ ಬಳಿ ಗೂಡ್ಸ್ ವ್ಯಾನ್ ಇತ್ತು. ಅದನ್ನು ಓಡಿಸುವಂತೆ ಮಗನಿಗೆ ತಿಳಿಸಿದ್ದೆವು. ಆದರೆ, ಆತನಿಗೆ ತನ್ನ ಹೆಂಡತಿಯ ಮೇಲಿದ್ದ ಪ್ರೀತಿ ನಮ್ಮೊಂದಿಗೆ ಇರಲು ಬಿಡಲಿಲ್ಲ. ಮಗು ಹುಟ್ಟಿದ ನಂತರ ಕಾವ್ಯಾ ನಮ್ಮ ಮನೆ ಬಿಟ್ಟು ಹೋಗಿದ್ದಳು. ಮತ್ತೆ ವಾಪಸ್ ಬರಲೇ ಇಲ್ಲ. ನಾವು ಆಕಾಶ್‌ನ ಮೊಬೈಲ್ ಫೋನ್ ಅನ್ನು ಪೊಲೀಸರಿಗೆ ನೀಡಿದ್ದೇವೆ. ಅವನಿಗೆ ಏನಾಗಿರಬಹುದು ಎಂಬುದರ ಕುರಿತು ಕೆಲವು ಸುಳಿವುಗಳೂ ನಮಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಆಕಾಶ್ ಕುಟುಂಬಸ್ಥರಿಂದ ದೂರು ಪಡೆದು ತನಿಖೆ ಆರಂಭಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Advertisement