ಗೌರಿ ಲಂಕೇಶ್ ಹತ್ಯೆ ಪ್ರಕರಣ: 3 ಆರೋಪಿಗಳ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಅಮಿತ್ ದಿಗ್ವೇಕರ್ ಸೇರಿದಂತೆ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಗೌರಿ ಲಂಕೇಶ್
ಗೌರಿ ಲಂಕೇಶ್
Updated on

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಅಮಿತ್ ದಿಗ್ವೇಕರ್ ಸೇರಿದಂತೆ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಗೌರಿ ಹತ್ಯೆ ಪ್ರಕರಣದ ಐದನೇ ಆರೋಪಿ ಅಮಿತ್‌ ದಿಗ್ವೇಕರ್‌ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಪ್ರದೀಪ್‌ ಮಹಾಜನ್‌; ಏಳನೇ ಆರೋಪಿ ಸುರೇಶ್‌ ಎಚ್‌ ಎಲ್‌ ಅಲಿಯಾಸ್‌ ಟೀಚರ್‌ ಮತ್ತು 17ನೇ ಆರೋಪಿ ಕೆ ಟಿ ನವೀನ್‌ ಕುಮಾರ್‌ ಅಲಿಯಾಸ್‌ ನವೀನ್‌ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಅರ್ಜಿಗಳ ಸುದೀರ್ಘ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

11ನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ.

ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್‌ ನಾಯಕ್‌ ಆಗಿದ್ದು, ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ ಎಂದಿತು.

ಗೌರಿ ಲಂಕೇಶ್
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಆರೋಪಿ ಅಮಿತ್‌ ದಿಗ್ವೇಕರ್‌ ಪ್ರತಿನಿಧಿಸಿದ್ದ ವಕೀಲ ಬಸವರಾಜ ಸಪ್ಪಣ್ಣವರ್‌ ಅವರು “ಒಂದನೇ ಆರೋಪಿ ಅಮೋಲ್‌ ಕಾಳೆಯ ಸ್ವಯಂ ಹೇಳಿಕೆ ಆಧರಿಸಿ ಅಮಿತ್‌ನನ್ನು ಬಂಧಿಸಲಾಗಿದೆ. ಇಡೀ ಪ್ರಕರಣದಲ್ಲಿ ಅಮಿತ್‌ ಮೇಲಿರುವ ಏಕೈಕ ಆರೋಪ ಹಣಕಾಸಿನ ನೆರವು ನೀಡಿರುವುದು. ಅವರು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಅಮಿತ್‌ರಿಂದ ಆಧಾರ್‌ ಕಾರ್ಡ್‌, ಗುರುತಿನ ಟೀಟಿ, ಬಸ್‌ ಟಿಕೆಟ್‌ ಜಪ್ತಿ ಮಾಡಲಾಗಿದೆ. ಬೇರೆ ಏನೂ ಮಾಡಿಲ್ಲ. 2018ರ ಮೇ 21ರಿಂದ ಜೈಲಿನಲ್ಲಿದ್ದಾರೆ. 11ನೇ ಆರೋಪಿ ಮೋಹನ್‌ ನಾಯಕ್‌ಗೆ ನೀಡಿರುವಂತೆ ತಮಗೂ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಆರೋಪಿ ಕೆ ಟಿ ನವೀನ್‌ ಕುಮಾರ್‌ (ಹೊಟ್ಟೆ ನವೀನ್‌) ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು 13ನೇ ಆರೋಪಿ ಸುಜಿತ್‌ (ಸುಜಿತ್‌ ಸಮನ್ವಯಕಾರನ ಪಾತ್ರ ವಹಿಸಿದ್ದಾನೆ) ಜೊತೆ ನವೀನ್‌ ಕುಮಾರ್‌ ಪಾರ್ಕ್‌ನಲ್ಲಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ನವೀನ್‌ನಿಂದ ಸಿಮ್‌ ಕಾರ್ಡ್‌ ವಶಪಡಿಸಲಾಗಿದೆ ಎಂದು ಹೇಳಲಾಗಿದೆ. ಸಿಮ್‌ ಕಾರ್ಡ್‌ ನೀಡಿದ ವ್ಯಕ್ತಿಯ ಹೆಸರು ನವೀನ್‌ ಕುಮಾರ್‌ ಆಗಿದ್ದು, ಅವರು ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ ಎಂದರು.

ಮುಂದುವರಿದು, ಮೊದಲಿಗೆ ಕೆ ಟಿ ನವೀನ್‌ ಕುಮಾರ್‌ ಮೊದಲ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಮಾಡಲಾಗಿತ್ತು. ಎರಡನೇ ಆರೋಪ ಪಟ್ಟಿಯಲ್ಲಿ 17ನೇ ಆರೋಪಿ ಮಾಡಲಾಗಿದೆ. ಸಕಾರಣವಿಲ್ಲದೇ ನವೀನ್‌ನನ್ನು ಬದಿಗೆ ಸರಿಸಲಾಗಿದೆ. ಮೆಜೆಸ್ಟಿಕ್‌ನಲ್ಲಿ ಸಜೀವ ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೊದಲಿಗೆ ನವೀನ್‌ನನ್ನು ಬಂಧಿಸಲಾಗುತ್ತದೆ. ಈ ಸಂಬಂಧ ಉಪ್ಪಾರ ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಮೇಲೆ ಆತನನ್ನು ವಶಕ್ಕೆ ಪಡೆಯಲಾಗಿತ್ತು. ನವೀನ್‌ ವಿರುದ್ಧದ ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಾಗಿದೆ ಎಂದು ವಿವರಿಸಿದರು.

2020ರ ಜನವರಿ 10ರಂದು ಮೊದಲ ಜಾಮೀನು ಅರ್ಜಿ ವಜಾಗೊಂಡಿದೆ. ನಾಲ್ಕು ವರ್ಷಗಳ ಬಳಿಕ ಜಾಮೀನು ಕೋರುತ್ತಿದ್ದೇನೆ. ಆರೋಪ ನಿಗದಿಗೂ ಮುನ್ನ ಮತ್ತು ಮೂರನೇ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಜಾಮೀನು ಕೋರಿದ್ದೆ. ಮೋಹನ್‌ ನಾಯಕ್‌ಗೆ ಜಾಮೀನು ನೀಡಿರುವುದನ್ನು ಪರಿಗಣಿಸಿ, ಪರಿಸ್ಥಿತಿ ಬದಲಾಗಿರುವುದರಿಂದ ಜಾಮೀನು ನೀಡಬೇಕು. ಒಟ್ಟಾರೆ, 527 ಸಾಕ್ಷ್ಯಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 2022ರ ಜುಲೈ 11ರಂದು ವಿಚಾರಣೆ ಆರಂಭವಾಗಿದ್ದು, ಎರಡು ವರ್ಷದಲ್ಲಿ 130 ಸಾಕ್ಷಿ ಮಾತ್ರ ವಿಚಾರಣೆ ನಡೆಸಲಾಗಿದೆ. ಆರೋಪಿಯು ಆರು ವರ್ಷದಿಂದ ಜೈಲಿನಲ್ಲಿದ್ದಾರೆ. ಆರೋಗ್ಯದ ಕಾರಣ ನೀಡಿ ಹಿಂದೆ ಜಾಮೀನು ಕೋರಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನ್ಯಾಯಾಲಯ ಅನುಮತಿಸಿತ್ತು ಎಂದರು.

ಗೌರಿ ಲಂಕೇಶ್
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಜಾಮೀನು ಆದೇಶ ರದ್ದುಗೊಳಿಸುವಂತೆ 'ಸುಪ್ರೀಂ' ನೋಟಿಸ್

ಇನ್ನೊಬ್ಬ ಆರೋಪಿ ಸುರೇಶ್‌ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “15ನೇ ಆರೋಪಿ ವಿಕಾಸ್‌ ಪಾಟೀಲ್‌ಗೆ ಗೌರಿ ಲಂಕೇಶ್‌ ಅವರ ವಿಳಾಸ ಪತ್ತೆ ಮಾಡಿಕೊಡಿಕೊಟ್ಟಿರುವ, ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ನೆರವಾಗಿರುವ ಆರೋಪ ಸುರೇಶ್‌ ಮೇಲಿದೆ. 2017ರ ಜುಲೈನಲ್ಲಿ ಸೀಗೆಹಳ್ಳಿ ಗೇಟ್‌ ಸಮೀಪ ಮನೆ ಬಾಡಿಗೆ ಪಡೆದು ಶಸ್ತ್ರಾಸ್ತ್ರ ಸಂಗ್ರಹ ಮಾಡಿರುವುದು ಮತ್ತು ಗೌರಿಯವರನ್ನು ಕೊಲ್ಲಲು ಶೂಟಿಂಗ್‌ ರಿಹರ್ಸಲ್‌ ನಡೆಸಲು ಬೈಕ್‌ ನೀಡಿದ್ದ ಆರೋಪ ಮಾಡಲಾಗಿದೆ. ಅಮೋಲ್‌ ಕಾಳೆ ಮತ್ತು ವಿಕಾಸ್‌ ಪಾಟೀಲ್‌ ಬೈಕ್‌ ರಿಹರ್ಸಲ್‌ ಮಾಡಿದ್ದಾರೆ. ಇಲ್ಲಿ ಸುರೇಶ್‌ ಪಾತ್ರವಿಲ್ಲ. ಸಾಕ್ಷ್ಯ ನಾಶ ಮಾಡಿದ ಗಂಭೀರ ಆರೋಪ ಮಾಡಲಾಗಿದೆ. ಇತರೆ ಆರೋಪಿಗಳಿಗೆ ವಾಸಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಅಪರಾಧ ನಡೆಯುವಾಗ ಸುರೇಶ್‌ ಹೆರೂರಿನಲ್ಲಿದ್ದರು. ಅಪರಾಧದಲ್ಲಿ ಭಾಗಿಯಾಗಿರುವುದಕ್ಕೆ ಪೂರಕವಾಗಿ ಇದುವರೆಗೆ ವಿಚಾರಣೆ ನಡೆಸಿರುವ ಯಾರೂ ಸಾಕ್ಷ್ಯ ನುಡಿದಿಲ್ಲ” ಎಂದರು.

ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು “ಮೋಹನ್‌ ನಾಯಕ್‌ ವಿರುದ್ಧದ ಕೊಲೆ ಮತ್ತು ಪಿತೂರಿಗೆ ಸಾಕ್ಷಿ ಇದೆ ಎಂದು ಹೈಕೋರ್ಟ್‌ನ ಬೇರೊಂದು ಪೀಠವು (ನ್ಯಾ. ಬಿ ಎ ಪಾಟೀಲ್) ಜಾಮೀನು ತಿರಸ್ಕರಿಸಿದೆ. ಅದಾಗ್ಯೂ, ತಾವು ಮೋಹನ್‌ ನಾಯಕ್‌ಗೆ ಜಾಮೀನು ಮಂಜೂರು ಮಾಡಿರುವ (ಒಪ್ಪತಕ್ಕದ್ದಲ್ಲದ-ಪರ್‌ ಇನ್ಯೂಕುರಿಯಮ್)‌ ಆದೇಶವನ್ನು ಹಾಲಿ ಜಾಮೀನು ಅರ್ಜಿಗಳಿಗೆ ಅನ್ವಯಿಸಬಾರದು. ಮೋಹನ್‌ ನಾಯಕ್‌ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆಗೆ ಬಾಕಿ ಇದೆ ಎಂದರು.

ಮುಂದುವರಿದು, ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಆರೋಪ ಮುಕ್ತಿ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಅವುಗಳನ್ನು ಪ್ರಶ್ನಿಸಲಾಗಿಲ್ಲ. ಗೌರಿ ಹತ್ಯೆ ಪ್ರಕರಣದಲ್ಲಿ ಅಪಾರ ಸಾಕ್ಷ್ಯವಿದೆ. ಇದೊಂದು ಹೀನಕೃತ್ಯವಾಗಿದ್ದು, ಅಪರಾಧದ ಗಂಭೀರತೆಯನ್ನು ಪರಿಗಣಿಸಬೇಕು. ಇದೊಂದು ಅಂತಾರಾಜ್ಯ ಸಿಂಡಿಕೇಟ್‌ ಆಗಿದ್ದು, ಆರೋಪಿಗಳು ಸುದೀರ್ಘವಾಗಿ ಜೈಲಿನಲ್ಲಿದ್ದಾರೆ ಎಂಬುದು ಜಾಮೀನಿಗೆ ಮಾನದಂಡವಾಗಬಾರದು” ಎಂದರು.

ಗೌರಿ ಹತ್ಯೆ ಕೊಲೆ ಮಾಡಿರುವ ಇಡೀ ಸಿಂಡಿಕೇಟ್‌ ಒಂದಲ್ಲಾ ಒಂದು ರೀತಿಯಲ್ಲಿ ಎಂ ಎಂ ಕಲಬುರ್ಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌ ಕೊಲೆಯಲ್ಲೂ ಭಾಗಿಯಾಗಿದೆ. ಇದೇ ಸಿಂಡಿಕೇಟ್‌ ಅದರಲ್ಲೂ ಅರ್ಜಿದಾರರಾಗಿರುವ ಅಮಿತ್‌ ಮತ್ತು ನವೀನ್‌ ಕುಮಾರ್‌ ಪ್ರೊ. ಭಗವಾನ್‌ ಅವರನ್ನು ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ ಎಂದರು.

ಮೋಹನ್‌ ನಾಯಕ್‌ ಅವರಿಗೆ ಜಾಮೀನು ನೀಡುವುದಕ್ಕೆ ಮುನ್ನ ಸರ್ಕಾರವು ಗೌರಿ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸಲಾಗುವುದು ಎಂದು ತಿಳಿಸಿತ್ತು. ಮೋಹನ್‌ ನಾಯಕ್‌ ಪ್ರಕರಣದ ಆದೇಶ ಕಾಯ್ದಿರಿಸಿದ್ದರಿಂದ ಅದನ್ನು ನ್ಯಾಯಾಲದ ಗಮನಕ್ಕೆ ತರಲಾಗಿರಲಿಲ್ಲ. ವಿಶೇಷ ನ್ಯಾಯಾಲಯ ಆರಂಭಿಸುವ ವಿಚಾರವು ಹೈಕೋರ್ಟ್‌ ಮುಂದೆ ಪರಿಗಣನೆಯಲ್ಲಿದೆ ಎಂದರು.

ಗೌರಿ ಲಂಕೇಶ್
ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂ ಸೂಚನೆ

ಆಗ ಪೀಠವು ಎಸ್‌ಪಿಪಿಗೆ ನೀವು ನೀಡುತ್ತಿರುವ ಕೇಸ್‌ ಲಾಗಳು 20 ವರ್ಷಗಳ ಹಿಂದಿನವು. ಅದೆಲ್ಲವೂ ಪರಿಣಾಮ ಕಳೆದುಕೊಂಡಿವೆ. ಆರೋಪಿಯು ಸುದೀರ್ಘವಾಗಿ ಜೈಲಿನಲ್ಲಿದ್ದರೆ ಜಾಮೀನು ಅರ್ಜಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದರು.

ಆಗ ಎಸ್‌ಪಿಪಿ ನಾಯಕ್‌ ಅವರು “ಮಡಿಕೇರಿ, ಬೆಳಗಾವಿ, ಮಂಗಳೂರಿನಲ್ಲಿ ಈ ಸಿಂಡಿಕೇಟ್‌ ಸಭೆ ನಡೆಸಿದೆ. ನಿಡುಮಾಮಿಡಿ ಸ್ವಾಮೀಜಿ, ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌ ಮತ್ತು ಪ್ರೊ. ಭಗವಾನ್‌ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ. ಅರ್ಜಿದಾರ ಸುರೇಶ್‌ ಮನೆಯಲ್ಲಿ ಆರೋಪಿಗಳು ಉಳಿದುಕೊಳ್ಳಲು ಅವರ ಪತ್ನಿಯನ್ನು ತವರಿಗೆ ಕಳುಹಿಸುತ್ತಾರೆ. ಕೊಲೆ ಉದ್ದೇಶ ಮನೆಯವರಿಗೆ ಗೊತ್ತಾಗುತ್ತದೆ ಎಂದು ಅವರನ್ನು ಕಳುಹಿಸಲಾಗಿತ್ತೇ ವಿನಾ ಅವರು ಹಬ್ಬಕ್ಕೆ ಹೋಗಿರಲಿಲ್ಲ. ಸೆಪ್ಟೆಂಬರ್‌ 5ರಂದು ಗೌರಿ ಕೊಲೆಯಾದ ಬಳಿಕ ಆರೋಪಿಗಳು ಸುರೇಶ್‌ ಮನೆ ಖಾಲಿ ಮಾಡುತ್ತಾರೆ ಎಂದರು ವಿವರಿಸಿದರು.

ಒಂದು ಕಡೆ ಸುರೇಶ್‌ ಮನೆಯಲ್ಲಿ ಸಂಚು ನಡೆದರೆ ಮತ್ತೊಂದು ಕಡೆ ಎರಡನೇ ಆರೋಪಿ ಪರಶುರಾಮ್‌ ವಾಗ್ಮೋರೆ ಮತ್ತು ಮೂರನೇ ಆರೋಪಿ ಗಣೇಶ್‌ ಮಿಸ್ಕಿನ್‌ಗೆ ಕುಂಬಳಗೋಡಿನಲ್ಲಿ ಮೋಹನ್‌ ನಾಯಕ್‌ ಮನೆ ವ್ಯವಸ್ಥೆ ಮಾಡಿರುತ್ತಾನೆ. ಗೌರಿ ಕೊಲೆಗೆ ಬಳಕೆ ಮಾಡಿದ್ದ ಅಸ್ತ್ರವನ್ನು ಬೆಳಗಾವಿಗೆ ಕೊಂಡೊಯ್ದು, ಬಳಿಕ ಅದನ್ನು ಮುಂಬೈಗೆ ಕೊಂಡೊಯ್ದು ಹತ್ತನೇ ಆರೋಪಿ ಶರದ್‌ ನಾಶಪಡಿಸಿದ್ದಾನೆ ಎಂದು ಘಟನೆ ವಿವರಿಸಿದರು.

ಈ ಎಲ್ಲಾ ಕಾರಣಗಳಿಂದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದರು. ನ್ಯಾಯಾಲಯವು ಅಂತಿಮವಾಗಿ ಆದೇಶ ಕಾಯ್ದಿರಿಸಿತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com