ಕಪ್ಪತ್ತಗುಡ್ಡ ಸುತ್ತಲೂ ಗಣಿಗಾರಿಕೆಗೆ ನಿಷೇಧ: ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು: ಗದಗ ಜಿಲ್ಲೆಯ ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಕಲ್ಲು, ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಗದಗ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಆದೇಶವನ್ನು ಪ್ರಶ್ನಿಸಿ ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಗ್ರಾಮದ ಎಸ್ ಆರ್ ಬಳ್ಳಾರಿ ಹಾಗೂ ಕೆಲವು ಗಣಿಗಾರಿಕಾ ಕಂಪೆನಿಗಳೂ ಸೇರಿದಂತೆ ಸಲ್ಲಿಕೆಯಾಗಿದ್ದ ಒಟ್ಟು ಒಂಬತ್ತು ಅರ್ಜಿಗಳನ್ನು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿಗಳನ್ನು ವಜಾಗೊಳಿಸಿದೆ.
ಕಪ್ಪತಗುಡ್ಡ ಮೀಸಲು ಅರಣ್ಯವನ್ನು ವನ್ಯಜೀವಿ ಧಾಮ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ಈ ಅರಣ್ಯ ಪ್ರದೇಶದ ಸುತ್ತಲಿನ ಒಂದು ಕಿ ಮೀ ಪ್ರದೇಶವು ನಿಷೇಧಿತ ವಲಯವಾಗುತ್ತದೆ. ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಇಲ್ಲದೇ ಹೋದರೂ ಸಂರಕ್ಷಿತ ಪ್ರದೇಶದ ಅಂಚಿನಿಂದ ಒಂದು ಕಿ ಮೀ ವ್ಯಾಪ್ತಿಯ ಸ್ಥಳವನ್ನು ಸಂರಕ್ಷಿಸಬೇಕಾಗುತ್ತದೆ. ಆದ್ದರಿಂದ, ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿ ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗದು” ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ. ರಾಜ್ಯ ಸರ್ಕಾರದ ಪರ ಎಸ್ ಎಸ್ ಮಹೇಂದ್ರ ವಾದ ಮಂಡಿಸಿದ್ದರು.
ಗದಗ ಜಿಲ್ಲಾ ಕಾರ್ಯಪಡೆ ಸಮಿತಿಯು (ಗಣಿ), ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ; ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಕಲ್ಲು ಕ್ರಷರ್‌ಗಳ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರದ ಜೊತೆ 2022ರ ಸೆಪ್ಟೆಂಬರ್ 29ರಂದು ಸಭೆ ನಡೆಸಿತ್ತು.
ಈ ಸಭೆಯಲ್ಲಿ ಕಪ್ಪತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿ ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು, 14 ಕ್ವಾರಿಗಳ ಗುತ್ತಿಗೆ ಅಮಾನತು ಮಾಡಲು ಮತ್ತು ಯಾವುದಾದರೂ ನಿಯಮ ಉಲ್ಲಂಘನೆಯಾಗಿದ್ದರೆ ಅಂತಹ ಗುತ್ತಿಗೆಗಳನ್ನು ರದ್ದುಪಡಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿತ್ತು.
ಇದರ ಅನ್ವಯ ಕಲ್ಲು ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿ 2022ರ ಡಿಸೆಂಬರ್ 5ರಂದು ಗದಗ ಜಿಲ್ಲೆಯ ಗಣಿ–ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನೇತೃತ್ವದ ಮತ್ತು ಸಕ್ಷಮ ಪ್ರಾಧಿಕಾರ ಆದೇಶಿಸಿತ್ತು.
ಈ ಆದೇಶವನ್ನು ಕಪ್ಪತಗುಡ್ಡ ವನ್ಯಜೀವಿ ಧಾಮ ಗಡಿಯ ಒಂದು ಕಿಮೀ ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಕಲ್ಲು ಹಾಗೂ ಮರಳು, ಗಣಿಗಾರಿಕೆ ನಡೆಸುತ್ತಿದ್ದ ಅರ್ಜಿದಾರರು ಪ್ರಶ್ನಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ