
ಬೆಂಗಳೂರು: ಕರ್ನಾಟಕಕ್ಕೆ ಹೋಲಿಸಿದರೆ ಇತರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು. ಕರ್ನಾಟಕ ಹಾಲು ಒಕ್ಕೂಟ (KMF) ನಿರ್ಧಾರವು ರೈತರ ಹಿತದೃಷ್ಟಿಯಿಂದ ಕೂಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ. ಕೆಎಂಎಫ್ ಕೂಡ ಉಳಿಯಬೇಕು ಹೀಗಾಗಿ ಗ್ರಾಹಕರಿಗೆ ನೀಡುತ್ತಿರುವ ಹಾಲಿನ ಪ್ರಮಾಣ ಹೆಚ್ಚಿಸಿ ಅದಕ್ಕೆ 2 ರೂಪಾಯಿ ಹೆಚ್ಚಿಸಿದ್ದೇವೆ ಹೊರತು ಹಾಲಿನ ದರ ಹೆಚ್ಚಳ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಲಿನಿಂದ ಸಿಗುವ ಹಣ ರೈತರಿಗೆ ಸೇರಿದ್ದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಬೇಕಿತ್ತು. ಪ್ರತಿ ಲೀಟರ್ ಅಮುಲ್ ಹಾಲಿನ ಬೆಲೆ ಎಷ್ಟು? ಬೇರೆ ರಾಜ್ಯಗಳಲ್ಲಿ ಹಾಲಿನ ಬೆಲೆ ಎಷ್ಟು? ಪ್ರತಿಭಟನೆ ಮಾಡುವವರು ನಮ್ಮ ರಾಜ್ಯದ ಬೆಲೆಗಳನ್ನು ಬೇರೆ ರಾಜ್ಯಗಳಿಗೆ ಹೋಲಿಸಬೇಕು ಎಂದರು.
ಬಿಜೆಪಿಯದ್ದು ಡೋಂಗಿ ರೈತಪರ ಹೋರಾಟ: ಇಂದು ಹಾಲಿನ ದರ ಪರಿಷ್ಕರಣೆಯನ್ನು ವಿರೋಧಿಸುವ ಮೂಲಕ ಬಿಜೆಪಿ ನಾಯಕರು ರೈತರ ವಿರೋಧಿ ಎಂಬುದನ್ನು ಬಯಲಿಗೆಳೆದಿದ್ದಾರೆ ಎಂದರು.
ರೈತನ ಮಗನಾದ ನನಗೆ ಹಾಲು ಉತ್ಪಾದನೆ ಎಷ್ಟು ಕಷ್ಟ ಎಂದು ತಿಳಿದಿದೆ. ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ 10 ರೂ.ಗೂ ಹೆಚ್ಚು ನಷ್ಟವಾಗುತ್ತಿದ್ದು, ಒಮ್ಮೆ 3 ರೂ., ಈಗ 2 ರೂ. ಏರಿಸಿದ ನಂತರವೂ ರೈತರ ಹಿತ ಕಾಯುತ್ತಿದೆ. 2 ರೂಪಾಯಿ ದೊಡ್ಡ ಮೊತ್ತವಲ್ಲ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯವರು ಹೊರಗೆ ಬಂದು ಪ್ರತಿಭಟನೆ ಮಾಡಲಿ ಆದರೆ ರೈತರ ಸ್ಥಿತಿಯ ಬಗ್ಗೆಯೂ ತಿಳಿದುಕೊಳ್ಳಬೇಕಲ್ಲವೇ ಎಂದರು.
ರೈತರು ಹಸುಗಳನ್ನು ಸಾಕಲು ಸಾಧ್ಯವಾಗದ ಕಾರಣ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಸುಗಳನ್ನು ಸಾಕುವ ಕಷ್ಟ ಅರ್ಥವಾಗಬೇಕು. ಪ್ರತಿಪಕ್ಷಗಳು ಪ್ರತಿಭಟನೆ ಮಾಡುವ ಬದಲು ಹಾಲಿನ ದರ ಏರಿಕೆಗೆ ಒತ್ತಾಯಿಸಬೇಕಿತ್ತು ಎಂದರು.
ಹಾಲಿನ ದರ ಹೆಚ್ಚಳವಿಲ್ಲ: ನಂದಿನಿ ಹಾಲಿನ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಆದರೆ ಪ್ರತಿ ಪ್ಯಾಕೆಟ್‌ನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ಇರುತ್ತದೆ. ಹೆಚ್ಚಿದ ಪ್ರಮಾಣಕ್ಕೆ ಅನುಗುಣವಾಗಿ ದರವನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇಂದು ಸ್ಪಷ್ಟಪಡಿಸಿದ್ದಾರೆ.
ಪರಿಷ್ಕೃತ ದರ ಇಂದು ಬುಧವಾರದಿಂದಲೇ ಜಾರಿಗೆ ಬಂದಿದೆ.
Advertisement