ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ತನಿಖೆ ಸಿಸಿಬಿಗೆ ವರ್ಗಾವಣೆ

ಘಟನೆಗೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದ ನಗರ ಪೊಲೀಸ್ ಆಯುಕ್ತರು
ರಾಮೇಶ್ವರ ಕೆಫೆ(ಸಂಗ್ರಹ ಚಿತ್ರ)
ರಾಮೇಶ್ವರ ಕೆಫೆ(ಸಂಗ್ರಹ ಚಿತ್ರ)

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆಯನ್ನು ರಾಜ್ಯ ಸರ್ಕಾರವು ಸಿಸಿಬಿ ಹೆಗಲಿಗೆ ಒಪ್ಪಿಸಿದ್ದು, ತನಿಖಾಧಿಕಾರಿಯಾಗಿ ಎಸಿಪಿ ನವೀನ್ ಕುಲಕರ್ಣಿ ನೇಮಕಗೊಂಡಿದ್ದಾರೆ.

ರಾಮೇಶ್ವರಂ ಕೆಫೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಎಲ್ಲರೂ ಸಹಕರಿಸಬೇಕೆಂದು ಕೋರಿದ್ದಾರೆ.

ವಿವಿಧ ತನಿಖಾ ತಂಡಗಳು ರಾತ್ರಿಯೆಲ್ಲಾ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡ 9 ಜನರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಯಾರನ್ನೂ ಬಂಧಿಸಿಲ್ಲ: ಇನ್ನು ಘಟನೆಗೆ ಸಂಬಂಧಿಸಿದಂತೆ ಶಂಕಿತರನ್ನು ವಶಕ್ಕೆ ಮಾತ್ರ ಪಡೆಯಲಾಗಿದೆ, ಯಾರನ್ನೂ ಇದುವರೆಗೆ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿಯ ಚಹರೆ, ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಲೆ ಮೇಲೆ ಟೊಪ್ಪಿ, ಗಡ್ಡದಾರಿಯಾಗಿರುವ ಶಂಕಿತ ವ್ಯಕ್ತಿ ಬಾಂಬ್ ಸ್ಫೋಟಿಸಿರುವ ಎಂಬ ಶಂಕೆ ವ್ಯಕ್ತವಾಗಿದೆ. ಶಂಕಿತ ವ್ಯಕ್ತಿ ಬಸ್ಸೊಂದರಲ್ಲಿ ಬಂದು ಕೆಫೆಗೆ ಹತ್ತಿರದ ಬಸ್ ಸ್ಟಾಪ್​ನಲ್ಲಿ ಇಳಿದು ಹೋಟೆಲ್​ಗೆ ಹೋಗಿದ್ದಾನೆ. ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೆಫೆಯೊಳಗೆ ಹೋದವನು ಅಲ್ಲಿದ್ದ ಮರವೊಂದರ ಬಳಿ ಕೂತು ಇಡ್ಲಿ ತಿಂದಿದ್ದಾನೆ. ಗಡ್ಡಧಾರಿಯಾಗಿರುವ ಶಂಕಿತ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ ಮತ್ತು ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ರಾಜ್ಯ ವಿವಿಧ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ನಗರದ ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಎಲ್ಲಾ ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲೂ ನಿಗಾ ಇಡಲು ಸೂಚನೆ ನೀಡಲಾಗಿದೆ. ರೈಲು ನಿಲ್ದಾಣಗಳಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಎಂದಿನಂತೆ ಪ್ರಯಾಣಿಕರ ಸಂಚಾರ ಮುಂದುವರಿದಿದೆ.

ಕೆಎಸ್​​ಆರ್​​​ಟಿಸಿ ನಿಲ್ದಾಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಯಾಣಿಕರ ಬ್ಯಾಗುಗಳನ್ನು ಹೋಮ್ ಗಾರ್ಡ್ಸ್ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಯಾಣಿಕರ ಮೇಲೆ ಕೆಎಸ್​​ಆರ್​​ಟಿಸಿ ಅಧಿಕಾರಿಗಳು ಕೂಡ ನಿಗಾ ಇಟ್ಟಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಅಂಥವರ ಮೇಲೆ ನಿಗಾ ಇಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com