
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಪ್ರಾಥಮಿಕ ಗಮನ ಆಹಾರ, ವಸತಿ, ಆರೋಗ್ಯ ಮತ್ತು ಶಿಕ್ಷಣವಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಶನಿವಾರ ಹೇಳಿದರು.
ಕೆಆರ್ ಪುರಂನಲ್ಲಿ ವಸತಿ ರಹಿತರಿಗೆ ಮನೆ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಡವರಿಗೆ ಉಚಿತ ಮನೆ ಎಂಬ ಪರಿಕಲ್ಪನೆಯನ್ನು ತಂದವರು ಇಂದಿರಾಗಾಂಧಿ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಸತಿ ಇಲಾಖೆಯು 5 ಲಕ್ಷ ರೂ ಹೆಚ್ಚುವರಿ ಅನುದಾನವನ್ನು ನೀಡಿದೆ ಎಂದರು.
'ನಾವು ಎಲ್ಲಾ ಬೆಂಬಲವನ್ನು ನೀಡುತ್ತಿರುವಾಗ, ಕೇಂದ್ರದ ಬಿಜೆಪಿ ಸರ್ಕಾರವು ಬಡವರ ಮನೆಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಬಡವರು 1.26 ಲಕ್ಷ ಜಿಎಸ್‌ಟಿ ಕಟ್ಟುವುದು ಹೇಗೆ?. ನಗರಗಳಲ್ಲಿನ ಕೊಳೆಗೇರಿಗಳನ್ನು ಕೊನೆಗೊಳಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಆದ್ದರಿಂದ, ನಾವು ಈ ವರ್ಷದ ಬಜೆಟ್‌ನಲ್ಲಿ ನಗರ ವಸತಿ ಯೋಜನೆಗಳನ್ನು ಸೇರಿಸಿದ್ದೇವೆ. ಬಡವರಿಗೆ ಅನ್ನ, ನಿವೇಶನ, ಮನೆ ನೀಡುವ ಯೋಜನೆಗಳನ್ನು ಆರಂಭಿಸಿದ್ದು ಕಾಂಗ್ರೆಸ್ ಪಕ್ಷ. ಪ್ರಧಾನಿ ನರೇಂದ್ರ ಮೋದಿ ನಮ್ಮ ಕಲ್ಯಾಣ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ‘ಖಾತರಿ ಯೋಜನೆ’ಗಳನ್ನು ಲೇವಡಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 'ಅವರು ಏನು ಬೇಕಾದರೂ ಹೇಳಲಿ. ರಾಜ್ಯ ಸರ್ಕಾರ ಉಚಿತ ಮನೆ ನೀಡುವುದು ಸೇರಿದಂತೆ ಕಲ್ಯಾಣ ಯೋಜನೆಗಳನ್ನು ನೀಡುವುದನ್ನು ಮುಂದುವರಿಸುತ್ತದೆ. ಕೆಲವು ಬಿಜೆಪಿ ನಾಯಕರು ಕೂಡ ನಮ್ಮ ಖಾತರಿ ಯೋಜನೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ವಸತಿ ಸಚಿವ ಬಿಝಡ್ ಜಮೀರ್ ಅಹಮದ್ ಖಾನ್ ಅವರ ಕಾರ್ಯವನ್ನು ಶ್ಲಾಘಿಸಿದ ಅವರು, ಬಡವರ ಸಹಾಯಕ್ಕಾಗಿ ಶ್ರಮಿಸುತ್ತಿದ್ದಾರೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಹಸ್ತಾಂತರಿಸಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ವಸತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement