ಬೆಂಗಳೂರು: ವಿಚಾರಣಾಧೀನ ಕೈದಿಯ ಹೊಟ್ಟೆಯಲ್ಲಿ ‘ಅನಪೇಕ್ಷಿತ ವಸ್ತು’ ಪತ್ತೆಯಾಗಿದ್ದು, ಬೆಂಗಳೂರು ಕೇಂದ್ರ ಕಾರಾಗೃಹದ ಮೂವರು ಯುವ ಜೈಲು ವಾರ್ಡರ್‌ಗಳ ವೃತ್ತಿಜೀವನಕ್ಕೆ ಕುತ್ತು ತರುವ ಸಾಧ್ಯತೆಯಿದೆ.
ವಿಚಾರಣಾಧೀನ ಕೈದಿಯಾಗಿದ್ದ ರೆಹಮಾನ್ ಖಾನ್ ಜೈಲು ಪ್ರವೇಶಿಸುವವರೆಗೂ ಜೈಲು ವಾರ್ಡರ್ ಗಳಾದ ರವೀಂದ್ರನಾಥ ಕೆ ಹೂಗಾರ (28), ಆನಂದ ಕಡಕೋಲ್ (27) ಮತ್ತು ದೊರೆನಾಯ್ಕ್ ಪಿಆರ್ (27) ಅವರಿಗೆ ಎಲ್ಲವೂ ಚೆನ್ನಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 10ರಂದು ರೆಹಮಾನ್ ಖಾನ್ ತೀವ್ರವಾದ ಹೊಟ್ಟೆ ನೋವು ಎಂದು ಹೇಳಿದಾಗ ಜೈಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಅನಪೇಕ್ಷಿತ ವಸ್ತು ಇರಬಹುದೆಂದು ಸಂಶಯಪಟ್ಟರು.
ಸೆಪ್ಟೆಂಬರ್ 10 ರಿಂದ 16 ರವರೆಗೆ ರೆಹಮಾನ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಾಗ ಅಲ್ಲಿನ ವೈದ್ಯರು ಹೊಟ್ಟೆಯಿಂದ 10”x5” ಪ್ಯಾಕೆಟ್ ನ್ನು ತೆಗೆದು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಪ್ಯಾಕೆಟ್ ತೆರೆದಾಗ ಅದರಲ್ಲಿ ಮೂರು ಮೊಬೈಲ್ ಫೋನ್ ಗಳು, ಮೂರು ಇಯರ್ ಫೋನ್ ಗಳು ಮತ್ತು ನಾಲ್ಕು ಚಾರ್ಜಿಂಗ್ ಕೇಬಲ್ ಗಳು ಇರುವುದನ್ನು ಕಂಡು ಅಧಿಕಾರಿಗಳು ಹೌಹಾರಿದರು. ನಂತರ ರೆಹಮಾನ್ ಖಾನ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಲಾಗಿತ್ತು.
ತನಿಖೆಯ ಸಂದರ್ಭದಲ್ಲಿ, ವಿಚಾರಣಾಧೀನ ಕೈದಿಗಳಿಗೆ ಸಹಾಯ ಮಾಡುವಲ್ಲಿ ಜೈಲು ಸಿಬ್ಬಂದಿಯ ಪಾತ್ರವನ್ನು ಶಂಕಿಸಲಾಗಿದೆ. ಹೀಗಾಗಿ, ಅವರ ವಿರುದ್ಧ ಕ್ರಮದ ಭಯದಿಂದ, ಮೂವರು ಜೈಲು ವಾರ್ಡರ್‌ಗಳು ಇತ್ತೀಚೆಗೆ ನಿರೀಕ್ಷಣಾ ಜಾಮೀನಿಗಾಗಿ 55 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದರು. ತಾವು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಆಕಾಂಕ್ಷಿಗಳಾಗಿದ್ದು, ಅದಕ್ಕಾಗಿ ಸಿದ್ಧತೆ ನಡೆಸಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಅವರನ್ನು ಬಂಧಿಸಿದರೆ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ.
ಅವರು ನಿರಪರಾಧಿಗಳಾಗಿದ್ದು, ಯಾವುದೇ ಅಪರಾಧ ಮಾಡಿಲ್ಲ ಎಂದು ಜೈಲು ವಾರ್ಡರ್‌ಗಳು ವಾದಿಸಿದ್ದಾರೆ. ವಿಚಾರಣಾಧೀನ ಕೈದಿಯ ಹೊಟ್ಟೆಯಲ್ಲಿ ಪತ್ತೆಯಾದ ವಸ್ತುಗಳಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ವಿಚಾರಣಾಧೀನ ಕೈದಿಯನ್ನು ಕೇಂದ್ರ ಕಾರಾಗೃಹಕ್ಕೆ ಕರೆತಂದಾಗ, ಆತನನ್ನು ಮೂರು ಹಂತದ ತಪಾಸಣೆಗೆ ಒಳಪಡಿಸಲಾಯಿತು, ಆದರೆ ಏನೂ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪ್ರಶ್ನಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಜೈಲು ವಾರ್ಡರ್‌ಗಳು ಜಾಮೀನು ಪಡೆದರೆ, ಅವರ ವಿರುದ್ಧ ಪ್ರಾಥಮಿಕ ಪ್ರಕರಣವಿರುವುದರಿಂದ ಅವರು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಅಡ್ಡಿಯಾಗಬಹುದು ಎಂದು ವಾದಿಸಿದರು.
ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗ್ಡೆ, “ನಾನು ದಾಖಲೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಪರಿಶೀಲಿಸಿದ್ದೇನೆ. ಅರ್ಜಿದಾರರ ಹೆಸರನ್ನು ದೂರಿನಲ್ಲಿ ಅಥವಾ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದರು.
ಫೆಬ್ರವರಿ 28 ರಂದು ಅವರ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ಕೆಲವು ಷರತ್ತುಗಳ ಮೇಲೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು.
Advertisement