ಚಿಕ್ಕಮಗಳೂರು: ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ದಾಯಾದಿಗಳ ಹೊಡೆದಾಟ ಪ್ರಕರಣದಲ್ಲಿ 7 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದ ಮೂರೇ ದಿನಗಳಲ್ಲಿ ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ಇದೀಗ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತೀಶ್ ಎಂಬಾತ ಕಳೆದ 7 ವರ್ಷಗಳ ಹಿಂದೆ ತನ್ನ ಅಣ್ಣನಾದ ಸಿದ್ದರಾಜು ಎಂಬಾತನ ಹೋಟೆಲ್ ನಲ್ಲಿ ಕೆಲಸ ಮಾಡುವ ವೇಳೆ ಚಿಕ್ಕಮಗಳೂರಿನ ದಂಟರಮಕ್ಕಿ ಬಳಿ ಹೊಡೆದಾಟ ಮಾಡಿಕೊಂಡಿದ್ದಾರೆ. ನಂತರ ತಲೆ ಮರೆಸಿಕೊಂಡು ಹಾಸನದ ಶ್ರೀನಗರದಲ್ಲಿ ವಾಸವಿದ್ದ ಕಳೆದ ನಾಲ್ಕು ದಿನಗಳ ಹಿಂದೆ ನಗರ ಠಾಣೆ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸತೀಶ್ ಅವರನ್ನು ಸ್ಥಳೀಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇದೀಗ ಸತೀಶ್ ಸಾವಿನ ಬಗ್ಗೆ ಆತನ ಪತ್ನಿ ನೇತ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಾಮೀನು ರಹಿತ ವಾರೆಂಟ್ ನಡಿ ಬಂಧಿಸಿ ನಾಲ್ಕು ದಿನಗಳ ನಂತರ ಹೊಡೆದು ಆಸ್ಪತ್ರೆಗೆ ಸೇರಿಸಿ ಇಂದು ನಮಗೆ ವಿಷಯ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸತೀಶ್ ಕೈ ಕುತ್ತಿಗೆ ಹಾಗೂ ದೇಹದ ಭಾಗದಲ್ಲಿ ಗಾಯಗಳಾಗಿದ್ದು ಕಾರಾಗೃಹ ಹಾಗೂ ಪೊಲೀಸ್ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರಬಹುದು ಎಂದು ಸತೀಶ್ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಚಾರಣಾಧೀನ ಹಂತದಲ್ಲಿ ಮೃತಪಟ್ಟ ಕಾರಣ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತನ ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
Advertisement