ಬೆಂಗಳೂರಿಗರಿಗೆ ರಿಲೀಫ್: ಖಾಸಗಿ ಟ್ಯಾಂಕ್ ನೀರಿಗೆ ದರ ನಿಗದಿ. ನಾಸೀರ್ ಹುಸೇನ್‍ಗೆ ಪ್ರತಿಜ್ಞಾವಿಧಿ ಬೋಧಿಸದಂತೆ ಪತ್ರ! - ಈ ದಿನದ ಸುದ್ದಿ ಮುಖ್ಯಾಂಶಗಳು: 07-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಬೆಂಗಳೂರಿಗರಿಗೆ ಬಿಗ್ ರಿಲೀಫ್: ಖಾಸಗಿ ಟ್ಯಾಂಕ್ ನೀರಿಗೆ ದರ ನಿಗದಿ

ಬೇಸಿಗೆಯ ಆರಂಭವಾಗಿದ್ದು, ಬೆಂಗಳೂರಿನಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೆಲ ಖಾಸಗಿ ನೀರಿನ ಟ್ಯಾಂಕ್ ಮಾಲೀಕರು ಸಾರ್ವಜನಿಕರಿಂದ ತಮ್ಮಗಿಷ್ಟ ಬಂದ ದರ ನಿಗದಿ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಈ ಮಾಫಿಯಾಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಿದ್ದು, ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನೀರಿನ ಟ್ಯಾಂಕರ್‌ಗಳಿಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿತ್ತು. 6 ಸಾವಿರ ಲೀಟರ್‌ ನೀರಿನ ಟ್ಯಾಂಕರ್ ಗೆ 600 ರಿಂದ 750 ರೂಪಾಯಿ. 8 ಸಾವಿರ ಲೀಟರ್‌ ನೀರಿಗೆ 700 ರಿಂದ 850 ರೂ. ನಿಗದಿಪಡಿಸಲಾಗಿದೆ. 12 ಸಾವಿರ ಲೀಟರ್‌ ನೀರಿಗೆ 1,000 ದಿಂದ 1,200 ರೂ. ದರವನ್ನು ನಿಗದಿಪಡಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿ.ಮೀಟರ್ ಒಳಗೆ 510 ರೂ ಮತ್ತು 10 ಕಿಲೋ ಮೀಟರ್ ದೂರ ಹೋದರೆ 650 ರೂ. ದರ ನಿಗದಿ ಮಾಡಲಾಗಿದೆ. ಅಲ್ಲದೆ ಮಾ. 7ರೊಳಗೆ ಖಾಸಗಿ ನೀರಿನ ಟ್ಯಾಂಕ್ ಮಾಲೀಕರಿಗೆ ಸ್ವಯಂ ನೋಂದಾಯಿಸಿಕೊಳ್ಳಲು ಬಿಬಿಎಂಪಿ ಗಡುವು ನೀಡಿದೆ.

2. ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಸಿದ್ದಗಂಗಾ ಮಠದ ಜಾತ್ರೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿ ತನ್ನ ಸ್ನೇಹಿತನ ಜೊತೆ ಬೆಟ್ಟದ ಬಳಿ ಕುಳಿತಿದ್ದಾಗ ಅಲ್ಲಿಗೆ ಬಂದ ಮೂವರು ಕಿರಾತಕರು ಬಾಲಕಿಯನ್ನು ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಸ್ನೇಹಿತನ ಜೊತೆಗಿದ್ದಿದ್ದನ್ನು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡು ಬಾಲಕಿಗೆ ಹೆದರಿಸಿದ್ದಾರೆ. ಅಲ್ಲದೆ ಬಾಲಕಿಯನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಮಠದ ಪಕ್ಕದಲ್ಲಿರುವ ಬಂಡೆಪಾಳ್ಯದ ರೂಂನಲ್ಲೇ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

3. ರಾಜ್ಯಸಭಾ ಸದಸ್ಯ ಸಯ್ಯದ್​ ನಾಸೀರ್ ಹುಸೇನ್ ಗೆ ಪ್ರತಿಜ್ಞಾವಿಧಿ ಬೋಧಿಸದಂತೆ ಪತ್ರ

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಸಯ್ಯದ್​ ನಾಸೀರ್ ಹುಸೇನ್ ಗೆ ಪ್ರತಿಜ್ಞಾವಿಧಿ ಬೋಧಿಸದಂತೆ ನಿವೃತ್ತ ಐಎಎಸ್, ಐಪಿಎಸ್, ಐಎಫ್​ಎಸ್ ಮತ್ತು ಐಆರ್​​ಎಸ್ ಅಧಿಕಾರಿಗಳು ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಅಧಿಕಾರಿಗಳ ನಡೆಯನ್ನು ಬಿಜೆಪಿ ಸ್ವಾಗತಿಸಿದೆ. ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಅಧಿಕಾರಿಗಳು, ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಸೈಯದ್ ನಸೀರ್ ಹುಸೇನ್ ಅವರಿಗೆ ಸಂಸತ್ತಿನ ಪ್ರತಿಷ್ಠಿತ ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಿಸಲು ಪ್ರಮಾಣ ವಚನ ಬೋಧಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ನಡೆಯನ್ನು ಸ್ವಾಗತಿಸಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು, ದೇಶದ್ರೋಹಿಗಳನ್ನು ಪೋಷಿಸಿ, ಬೆಂಬಲಿಸಿ ಅವರು ರಾಷ್ಟ್ರ ವಿದ್ರೋಹದ ಪಾಪದ ಕೆಲಸ ಮಾಡಿದ ಮೇಲೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಒಳಗೆ ಪ್ರವೇಶಿಸುವ ಅರ್ಹತೆಯೇ ಇಲ್ಲ. ಇಂತಹ ವ್ಯಕ್ತಿಗಳಿಗೆ ರಾಜ್ಯಸಭಾ ಸದಸ್ಯತ್ವ ನೀಡಬಾರದು. ನಾಸಿರ್ ಹುಸೇನ್ ಅವರ ರಾಜೀನಾಮೆ ಪಡೆದು ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

4. ರಾಜ್ಯದಲ್ಲಿ ಪವರ್ ಕಟ್ ಇಲ್ಲ: ಕೆಜೆ ಜಾರ್ಜ್

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಅಥವಾ ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಮಾಡುವ ಹಿನ್ನೆಲೆಯಲ್ಲಿ ಸುದೀರ್ಘ ನಿರ್ವಹಣಾ ಕಾರ್ಯಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು. 2023ರ ವಿದ್ಯುತ್ ಪರಿಸ್ಥಿತಿ ಮತ್ತೆ ಎದುರಾಗದಂತೆ ಮಾಡಲು ಸರ್ಕಾರವು 1500MW ವಿದ್ಯುತ್ ಅನ್ನು ಖರೀದಿಸುತ್ತಿದೆ. ಅದರಲ್ಲಿ 500MWನ್ನು ವಿನಿಮಯ ವ್ಯವಸ್ಥೆಯ ಮೂಲಕ ಇತರ ರಾಜ್ಯಗಳೊಂದಿಗೆ ಪಡೆಯಲಾಗುತ್ತದೆ. ಇನ್ನು ಕೂಡಗಿ ವಿದ್ಯುತ್‌ ಕೇಂದ್ರಕ್ಕೆ 200 ಮೆಗಾವ್ಯಾಟ್‌ ವಿದ್ಯುತ್‌ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

5. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಯ ಜಾಡು ಹಿಡಿದ NIA

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಬಾಂಬರ್ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಸುಜಾತ ಸರ್ಕಲ್‌ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದು, ನಂತರ ತುಮಕೂರಿನಿಂದ ಬಳ್ಳಾರಿಗೆ ಬಸ್‌ನಲ್ಲಿ ಬಂದು ನಂತರ ಮಂತ್ರಾಲಯ-ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾ ದಳ ಬಳ್ಳಾರಿ ಮತ್ತು ತುಮಕೂರು ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಶೋಧ ನಡೆಸಿ, ಮಾಹಿತಿ ಕಲೆ ಹಾಕಿದೆ. ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡ ಮಾಹಿತಿ ಪಡೆದಿದ್ದು ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಹಕಾರ ನೀಡಿದ್ದಾರೆ. ಬಾಂಬರ್ ನ ಸಿಸಿಟಿವಿ ಪೋಟೋವನ್ನು ಎನ್ ಐಎ ಬಿಡುಗಡೆ ಮಾಡಿತ್ತು. ಇದೇ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದ ಹರ್ಷ ಎಂಬುವವರು ಬಾಂಬರ್'ನ ರೇಖಾ ಚಿತ್ರವನ್ನು ಬಿಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com