ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ, CAA ಜಾರಿಗೆ ಅಧಿಸೂಚನೆ, 40 ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲ ಈ ದಿನದ ಸುದ್ದಿ ಮುಖ್ಯಾಂಶಗಳು: 11-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ

ಕರ್ನಾಟಕದಲ್ಲಿ ಕಲರ್‌ ಕಾಟನ್‌ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್‌ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಲರ್ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಗೋಬಿ ಮಂಚೂರಿಯನ್‌ ಸ್ಯಾಂಪಲ್‌ ಸಂಗ್ರಹಿಸಿದ್ದು, ಅದರಲ್ಲಿ ಟಾರ್‌ಟ್ರಾಸೈನ್‌, ಸನ್ಸೆಟ್‌ ಯೆಲ್ಲೋ‌ ಮತ್ತು ಕಾರ್ಮೋಸಿನ್‌ ಎಂಬ ರಾಸಾಯನಿಕಗಳು ಕಂಡುಬಂದಿವೆ. ಕಾಟನ್‌ ಕ್ಯಾಂಡಿ ಮಾದರಿಗಳಲ್ಲಿ ಕೂಡಾ ಟಾರ್‌ಟ್ರಾಸೈನ್‌ ಸನ್ಸೆಟ್‌ ಯೆಲ್ಲೋ‌ ಮತ್ತು ವಿಶೇಷವಾಗಿ ರೋಡಮೈನ್‌ ಬಿ ಬಳಸಲಾಗಿದೆ. ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಸೂಚಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು ಎಂದರು.

2. ಶೃಂಗೇರಿ ಪೋಕ್ಸೋ ಪ್ರಕರಣ: ತಾಯಿ ಸೇರಿ ನಾಲ್ವರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

2021ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ನ್ಯಾಯಾಲಯ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ ಸೇರಿ ನಾಲ್ವರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪೋಕ್ಸೋ ಪ್ರಕರಣದ ಒಟ್ಟು 53 ಆರೋಪಿಗಳಲ್ಲಿ 49 ಜನರನ್ನು ಖಲಾಸೆಗೊಳಿಸಿ, ನಾಲ್ವರು ತಪ್ಪಿತಸ್ಥರೆಂದು ಕಳೆದ ಗುರುವಾರ ತೀರ್ಪು ನೀಡಿದ್ದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಸಂತ್ರಸ್ತೆ ಬಾಲಕಿ ತಾಯಿ ಗೀತಾ ಮತ್ತು ಆಕೆಗೆ ಸಹಾಯ ಮಾಡಿದ್ದ ಗಿರೀಶ್, ದೇವಿಶರಣ್​​, ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ ತಲಾ 25 ಸಾವಿರ ದಂಡ ಹಾಗೂ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

3. 40 ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದೆ

40 ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದೆ. ರಾಜ್ಯದ 240 ತಾಲ್ಲೂಕುಗಳ ಪೈಕಿ 223ರಲ್ಲಿ ಬರ ಪರಿಸ್ಥಿತಿ ಇದ್ದು, ಈ ಪೈಕಿ 196 ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ಹೇಳಿದರು. ಬೆಂಗಳೂರಿನಲ್ಲಿ ನೀರಿನ ಅಭಾವ ಸೃಷ್ಠಿಯಾಗಿದೆ. ಬೆಂಗಳೂರು, ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಾವರಿ ಬೋರ್‌ವೆಲ್‌ಗಳಿದ್ದು, ತುರ್ತು ಪರಿಸ್ಥಿತಿ ಎದುರಾದರೆ ಅಲ್ಲಿಂದ ನೀರು ಹರಿಸಲು ಯೋಜಿಸಿದ್ದೇವೆ. 16,000 ಬೋರ್‌ವೆಲ್‌ಗಳ ಪೈಕಿ 7,000 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಹೊಸದಾಗಿ ಬೋರ್‌ವೆಲ್‌ ಕೊರೆಯುವವರು ಅನುಮತಿ ಪಡೆಯುವುದು ಕಡ್ಡಾಯ ಎಂದು ಡಿಸಿಎಂ ಹೇಳಿದರು.

4. ಮುರುಘಾ ಶ್ರೀ ವಿರುದ್ಧದ ಅತ್ಯಾಚಾರ ಆರೋಪ ರದ್ದತಿಗೆ ಹೈಕೋರ್ಟ್ ನಕಾರ

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಅತ್ಯಾಚಾರ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಲಯದ ಪ್ರಾಸಿಕ್ಯೂಷನ್‌ನ 'ಪೋಸ್ಟ್ ಆಫೀಸ್' ಆಗಿ ಕಾರ್ಯನಿರ್ವಹಿಸಬಾರದು ಎಂದು ಕೋರ್ಟ್ ಹೇಳಿದ್ದು, ಧಾರ್ಮಿಕ ಸಂಸ್ಥೆಗಳ(ದುರುಪಯೋಗ ತಡೆ) ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧದ ಆರೋಪಗಳನ್ನು ಮರುಪರಿಶೀಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ. ಅಲ್ಲದೆ ಶ್ರೀಗಳ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಮುಂದುವರಿಯುವಂತೆ ಆದೇಶಿಸಿದೆ.

5. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಅಧಿಸೂಚನೆ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಸಿಎಎ ನಿಯಮಗಳ ಅಧಿಸೂಚನೆಯಂತೆ ಕೇಂದ್ರದ ಮೋದಿ ಸರ್ಕಾರವು 2014ರ ಡಿ.31ರ ವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಹಿಂದೂ, ಸಿಖ್, ಜೈನ, ಬುದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ದೇಶದ ಪೌರತ್ವ ನೀಡಲಿದೆ. 2019ರಲ್ಲಿ ಅಂಗೀಕಾರಗೊಂಡಿದ್ದ ಈ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು. ಆದರೆ ದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದ ಕಾರಣ ಜಾರಿಗೆ ಅಧಿಸೂಚನೆ ಹೊರಡಿಸಿರಲಿಲ್ಲ.

6. ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಾದ್ಯಂತ ಕನಿಷ್ಠ 600 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭ

ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಾದ್ಯಂತ ಕನಿಷ್ಠ 600 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ, 'ಇಂದಿರಾ ಕ್ಯಾಂಟೀನ್‌ನಲ್ಲಿ ಎಲ್ಲರಿಗೂ 5 ರೂ.ಗೆ ಬೆಳಗಿನ ಉಪಾಹಾರ ಮತ್ತು 10 ರೂ.ಗೆ ಊಟ ನೀಡಲಾಗುತ್ತದೆ. ನಾವು ಬೆಂಗಳೂರಿನಲ್ಲಿ ಒಟ್ಟು 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸುತ್ತಿದ್ದೇವೆ. ಅವುಗಳ ಪೈಕಿ ಈಗಾಗಲೇ 40 ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com