'ಲೋಕ' ಗೆಲ್ಲಲು ಕಾಂಗ್ರೆಸ್ ನಿಂದ ಗ್ಯಾರಂಟಿ ಅಸ್ತ್ರ; 4 FIR ದಾಖಲು; ಈಜುಕೊಳಕ್ಕೆ ಕಾವೇರಿ ನೀರು ಬಳಸಿದ್ರೆ 5 ಸಾವಿರ ದಂಡ- ಈ ದಿನದ ಸುದ್ದಿ ಮುಖ್ಯಾಂಶಗಳು: 13-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಕೆಫೆ ಸ್ಫೋಟ: ಬಳ್ಳಾರಿಯಲ್ಲಿ ಶಂಕಿತ ಆರೋಪಿ ಅಂದರ್

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡವು ಇಂದು ಬೆಳಗ್ಗೆ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಶಬೀರ್ ಮೊಹಮ್ಮದ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ. ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಶಬ್ಬೀರ್ ಜತೆ ಮಾತನಾಡುತ್ತಿದ್ದ ಎಂದು ಎನ್ ಐಎ ತಂಡ ಶಂಕಿಸಿದೆ. ಎನ್‌ಐಎಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಶಂಕಿತ ಬಾಂಬರ್ ಮಾರ್ಚ್ 1 ರಂದು ಬೆಂಗಳೂರಿನಿಂದ ಹಿಂತಿರುಗಿದಾಗ ಶಬೀರ್ ಮೊಹಮ್ಮದ್ ಮಾತನಾಡಿದ್ದಾನೆ. ಈಗಾಗಲೇ ಎನ್‌ಐಎ ತಂಡ ಬಳ್ಳಾರಿಯ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದು, ಇದೀಗ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಶಬೀರ್‌ನನ್ನು ಬಂಧಿಸಲಾಗಿದೆ. ಶಂಕಿತ ಆರೋಪಿ ಮತ್ತು ಶಬೀರ್ ಮೊಹಮ್ಮದ್ ಬಸ್ ನಿಲ್ದಾಣದ ಬಳಿ ಸಂಭಾಷಣೆ ನಡೆಸಿದ್ದು, ನಂತರ ಆತ ತನ್ನ ಮೊಬೈಲ್ ಫೋನ್ ಬಳಸಿ ಇತರ ರಾಜ್ಯಗಳಲ್ಲಿ ನೆಲೆಸಿರುವ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಇತರರನ್ನು ಸಂಪರ್ಕಿಸಿದ್ದಾನೆ ಎಂದು ಎನ್ಐಎ ಹೇಳಿದೆ.

2. ಬ್ಯಾಡಗಿ ಎಪಿಎಂಸಿಯಲ್ಲಿ ರೈತರ ಪ್ರತಿಭಟನೆ: 81 ಮಂದಿ ಬಂಧನ

ಬ್ಯಾಡಗಿ ಎಪಿಎಂಸಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಳ್ಳರು ಲಾಭ ಮಾಡಿಕೊಂಡಿದ್ದು, ಕೆಲ ಅಂಗಡಿಗಳಿಗೆ ನುಗ್ಗಿ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 4 ಎಫ್ಐಆರ್ ದಾಖಲು ಮಾಡಿಕೊಂಡಿದ್ದು, 81 ಮಂದಿಯನ್ನು ಬಂಧಿಸಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಬ್ಯಾಡಗಿ ಪಟ್ಟಣದಲ್ಲಿ ಎಪಿಎಂಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ದಾಂಧಲೆ ಮಾಡಿದ್ದು, ಈ ವೇಳೆ ಉದ್ರಿಕ್ತಗೊಂಡ ರೈತರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದರು.

3. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೈಕೋರ್ಟ್ ನೋಟಿಸ್

ದಾವಣಗೆರೆಯಲ್ಲಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿರುವ ಹೈಕೋರ್ಟ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ನೊಟೀಸ್ ನೀಡಿದೆ. ಹಲವು ಕಟ್ಟಡ, ರಸ್ತೆ, ಪಾರ್ಕ್, ಕೆರೆ ಇನ್ನಿತರ ಸಾರ್ವಜನಿಕ ಹಣದಲ್ಲಿ ನಿರ್ಮಾಣ/ ಅಭಿವೃದ್ಧಿಗೊಂಡ ಮೂಲಸೌಕರ್ಯ ಯೋಜನೆಗಳಿಗೆ ಜೀವಂತ ಇರುವ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ವಿರೋಧಿಸಿ ದಾವಣಗೆರೆಯ ವಕೀಲ ಎಸಿ ರಾಘವೇಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

4. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಗ್ಯಾರಂಟಿ ಅಸ್ತ್ರ

ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದ ಪ್ರೇರಿತವಾಗಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಗೂ ಮಹಿಳೆಯರಿಗೆ ಐದು ಗ್ಯಾರಂಟಿಗಳನ್ನು ಇಂದು ಘೋಷಿಸಿದೆ. 'ನಾರಿ ನ್ಯಾಯ ಗ್ಯಾರಂಟಿ' ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಐದು ಭರವಸೆಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ಆರ್ಥಿಕ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವುದಾಗಿ ಮತ್ತು ಕೇಂದ್ರ ಸರ್ಕಾರಿ ಉದ್ಯೋದಗಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ. ಪಕ್ಷವು ಮಹಿಳೆಯರಿಗೆ "ನಾರಿ ನ್ಯಾಯ ಗ್ಯಾರಂಟಿ"ಯನ್ನು ಘೋಷಿಸಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ರೈತ ನ್ಯಾಯ ಮತ್ತು ಯುವ ನ್ಯಾಯದ ಭರವಸೆಗಳನ್ನು ಘೋಷಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

5. ಈಜುಕೊಳಕ್ಕೆ ಕಾವೇರಿ ನೀರು ಬಳಸಿದ್ರೆ 5 ಸಾವಿರ ದಂಡ

ಬೆಂಗಳೂರಿನಲ್ಲಿ ನೀರಿನ ಕೊರತೆ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ನಗರದ ಈಜುಕೊಳಗಳಿಗೆ ಕಾವೇರಿ ನೀರು ಬಳಸಬಾರದು ಎಂದು ಬೆಂಗಳೂರು ಜಲಮಂಡಲಿ ಆದೇಶಿಸಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ರೂ.5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಸೂಚನೆ ನೀಡಿದ್ದಾರೆ.

6. ಕಾಂಗ್ರೆಸ್ ಸರ್ಕಾರದ ಸಾಧನೆ ಮನದಟ್ಟು ಮಾಡಲು ಐವರು ವಕ್ತಾರರ ನೇಮಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯದ ಜನರ ಮುಂದಿಡಲು ಸಂಪುಟದ ಐವರು ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ಇಂದು ನೇಮಿಸಿದ್ದಾರೆ. ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಸಂತೋಷ್ ಲಾಡ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸರ್ಕಾರದ ವಕ್ತಾರರಾಗಿ ನೇಮಕಗೊಂಡಿರುವ ಈ ಎಲ್ಲಾ ಸಚಿವರು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ರಾಜ್ಯದ ಜನರ ಮುಂದಿಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com