ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ. ನಿಧಿ ಆಸೆಗೆ ಬಿದ್ದ ಮೂವರ ಸಜೀವ ದಹನ! - ಈ ದಿನದ ಸುದ್ದಿ ಮುಖ್ಯಾಂಶಗಳು: 23-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಐದು ತಿಂಗಳ ಕಾಲ ಕಾದರೂ ಇನ್ನೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್​ನ ವಾರದ ರಜೆ ಮುಗಿದ ಬಳಿಕ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು. ರಾಜ್ಯದ ಬರಗಾಲದ ಕುರಿತಂತೆ ರಾಜ್ಯ ಸರ್ಕಾರ ಅಧ್ಯಯನ ನಡೆಸಿದ್ದು ಬಳಿಕ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿತ್ತು. ಇದರಲ್ಲಿ 196 ತಾಲೂಕುಗಳು ತೀವ್ರ ಬರಗಾಲದಿಂದ ಕೂಡಿವೆ. ಬರಗಾಲದಿಂದ 48 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ, ತೋಟಗಾರಿಕೆ ಬೆಳೆ ನಷ್ಟ ಆಗಿದೆ. ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಲ್ಲದೆ ಮೂರು ಬಾರಿ ಮನವಿ ಸಲ್ಲಿಸಿದ್ದರೂ ಬರ ಪರಿಹಾರ ಘೋಷಣೆ ಮಾಡಿಲ್ಲ ಎಂದರು.

2. Namma Metroದಲ್ಲಿ ಮತ್ತೊಂದುಲೈಂಗಿಕ ಕಿರುಕುಳ: FIR ದಾಖಲು

ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಬಾರಿ ಮಹಿಳಾ ಭದ್ರತಾ ಸಿಬ್ಬಂದಿಯೇ ತಮ್ಮ ಹಿರಿಯ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿದ್ದಾರೆ. ಬೆಂಗಳೂರು ಮೆಟ್ರೋದಲ್ಲಿ ಖಾಸಗಿ ಭದ್ರತಾ ಏಜೆನ್ಸಿಯೊಂದರಲ್ಲಿ ಉದ್ಯೋಗಿಯಾಗಿರುವ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಇತ್ತೀಚೆಗೆ BMRCL ಹಿರಿಯ ಭದ್ರತಾ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದೆ. ಮಾತ್ರವಲ್ಲದೇ ಅಂತಹ ದುರ್ವರ್ತನೆಯನ್ನು ಸಹಿಸಿಕೊಳ್ಳುವಂತೆ ಮತ್ತು ಸಹಕರಿಸುವಂತೆ ಆಕೆಗೆ ಸೂಚಿಸಿದ್ದಕ್ಕಾಗಿ ಎಫ್‌ಐಆರ್ ನಲ್ಲಿ ತನ್ನ ಏಜೆನ್ಸಿಯ ಮಾಲೀಕರನ್ನೂ ಮಹಿಳೆ ಎರಡನೇ ಆರೋಪಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

3. ನಿಧಿ ಆಸೆಗೆ ಬಿದ್ದ ಮೂವರ ಸಜೀವ ದಹನ

ತುಮಕೂರಿನ ಕುಚ್ಚಂಗಿ ಕೆರೆಯ ಮೇಲಿರುವ Mesquite ತೋಪಿನಲ್ಲಿ ಸುಟ್ಟುಕರಕಲಾಗಿರುವ ಮಾರುತಿ ಸ್ವಿಫ್ಟ್‌ ಕಾರು ಪತ್ತೆಯಾಗಿದ್ದು, ಅದರಲ್ಲಿ ಮೂರು ಮೃತ ದೇಹಗಳು ಸಿಕ್ಕಿವೆ. ಮೃತರನ್ನು ಬೆಳ್ತಂಗಡಿಯ ಇಷಾಕ್, ಸಾಹುಲ್ ಅಮೀದ್ ಹಾಗೂ ಇಮ್ಮಿಯಾಜ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಕಾರಿನ ಡಿಕ್ಕಿಯಲ್ಲಿ ಎರಡು ಶವಗಳು ಮತ್ತು ಹಿಂಬದಿ ಸೀಟಿನಲ್ಲಿ ಒಂದು ಶವ ಪತ್ತೆಯಾಗಿದ್ದರಿಂದ ಇದು ಕೊಲೆ ಎಂದು ಪೊಲೀಸರು ಶಂಕಿಸಿದ್ದರು. ಅದರಂತೆ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಇದೀಗ ಕೊಲೆಯ ಉದ್ದೇಶ ತಿಳಿದುಬಂದಿದೆ. ತುಮಕೂರಿನ ಸ್ವಾಮಿ ಎಂಬುವರು ಪರಿಚಯಸ್ಥನಾಗಿದ್ದ ಇಷಾಕ್ ಗೆ ನಿಧಿ ಸಿಕ್ಕ ವಿಚಾರ ತಿಳಿಸಿದ್ದನು. ಅದನ್ನು ನಂಬಿದ್ದ ಇಷಾಕ್, ತನ್ನ ಸ್ನೇಹಿತರೊಂದಿಗೆ ತುಮಕೂರಿಗೆ ಬಂದಿದ್ದು ಇದೀಗ ಕೊಲೆಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾದ ಸ್ವಾಮಿ ಹಾಗೂ ಇನ್ನಿತರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

4. ರಾಮನಗರ ಉದ್ಯಮಿ ಆತ್ಮಹತ್ಯೆಗೆ ಪ್ರಚೋದನೆ ಜ್ಯೋತಿಷಿ ಬಂಧನ

ರಾಮನಗರದಲ್ಲಿ ಉದ್ಯಮಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಕನಕಪುರ ಗ್ರಾಮಾಂತರ ಪೊಲೀಸರು ನಕಲಿ ಜ್ಯೋತಿಷಿ ವಿಷ್ಣುಶಾಸ್ತ್ರಿ ಎಂಬುವರನ್ನು ಬಂಧಿಸಿದ್ದಾರೆ. ಮದ್ದೂರು ತಾಲೂಕಿನ ಚಂದೂಪುರ ಗ್ರಾಮದ ನಿವಾಸಿ ಮುತ್ತುರಾಜು ಎಂಬುವರು ಮಾರ್ಚ್ 9ರಂದು ಅರ್ಕಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಮೊದಲಿಗೆ ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮುತ್ತುರಾಜು ಮೊಬೈಲ್ ಪರಿಶೀಲಿಸಿದ ಪತ್ನಿ ಶಿಲ್ಪಾಗೆ ಬ್ಲ್ಯಾಕ್ ಮೇಲ್ ಮತ್ತು ಸುಲಿಗೆ ಮಾಡಿರುವುದು ತಿಳಿದುಬಂದಿದೆ. ಕೂಡಲೇ ಶಿಲ್ಪಾ ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ಪೊಲೀಸರು ವಿಷ್ಣುಶಾಸ್ತ್ರಿಯನ್ನು ಬಂಧಿಸಿದ್ದಾರೆ.

5. ಕಾಂಗ್ರೆಸ್ ನ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಇಂದು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಮೂಡಲಗಿರಿಯಪ್ಪ ಅವರು 1985ರಲ್ಲಿ ಶಿರಾ ವಿಧಾನಸಭೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ ರಾಷ್ಟ್ರ ರಾಜಕಾರಣದ ಕಡೆ ಮುಖಮಾಡಿದ್ದ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

6.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com