ಹಿಂದಿ-ಇಂಗ್ಲಿಷ್ ಬರದ ಕೋಟರನ್ನು ಗೆಲ್ಲಿಸಬೇಡಿ: ಜಯಪ್ರಕಾಶ್-ಸಿದ್ದು ವಿರುದ್ಧ ದೂರು. ಐತಿಹಾಸಿಕ ಬೂದಿಗೆರೆ ಕರಗ ರದ್ದು. ಸೋನುಗೌಡ ಕಾರಿನ ಮೇಲೆ ಕಲ್ಲು ತೂರಾಟ - ಈ ದಿನದ ಸುದ್ದಿ ಮುಖ್ಯಾಂಶಗಳು: 24-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಬಿಜೆಪಿ ದೂರು

ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಎರಡು ವಿಚಾರವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ದೂರು ನೀಡಿದೆ. ಶಾಸಕರನ್ನ ಸೆಳೆಯೋದಕ್ಕೆ ಬಿಜೆಪಿ 50 ಕೋಟಿ ಆಫರ್‌ ಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ ಹಿಂದಿ, ಇಂಗ್ಲಿಷ್ ಬರಲ್ಲ. ಅವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಡಿ ಎಂದಿದ್ದ ಜಯಪ್ರಕಾಶ್ ಹೆಗ್ಡೆ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್‌ ಮೀನಾಗೆ ದೂರು ನೀಡಲಾಗಿದೆ.

2. ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದು

ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದಾಗಿದೆ. ಕರಗ ಹೊರುವ ವಿಚಾರವಾಗಿ ಮೂರು ಗುಂಪುಗಳ ನಡುವೆ ವಾದ-ವಿವಾದ ಉಂಟಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿ ನಾಳೆ ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಬೂದಿಗೆರೆ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವ ರದ್ದಾಗಿದೆ. ಇದೀಗ ದ್ರೌಪಮ್ಮ ದೇಗುಲದ ಮುಂದೆ ಪೊಲೀಸರ ವ್ಯಾನ್​ಗಳು ನಿಂತಿದ್ದು ಭಾರೀ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಕರಗ ವಿಚಾರ ಕೋರ್ಟ್​ ಮೆಟ್ಟಿಲೇರಿದ್ದು, ಹೈಕೋರ್ಟ್​ನಲ್ಲೂ ಕರಗ ಕಿತ್ತಾಟ ಪ್ರಕರಣ ಇತ್ಯಾರ್ಥವಾಗಿಲ್ಲ. ಮೇ 27ಕ್ಕೆ ವಿಚಾರಣೆಯನ್ನು ಹೈ ಕೋರ್ಟ್ ಮುಂದೂಡಿರುವ ಕಾರಣ ಇದೀಗ ಕರಗ ಆಚರಣೆಯನ್ನು ನಿಲ್ಲಿಸಲಾಗಿದೆ.

3. ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸಗೌಡ ಕಾರಿನ ಮೇಲೆ ಕಲ್ಲು ತೂರಾಟ

ಕಾನೂನು ಬಾಹಿರವಾಗಿ ಮಗುವನ್ನ ದತ್ತು ಪಡೆದು ಪೊಲೀಸ್ ವಶದಲ್ಲಿರುವ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸಗೌಡರನ್ನು ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ಇಂದು ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದ ಸ್ಥಳ ಮಹಜರು ನಡೆಸಿದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರಬಂದಿದ್ದಾರೆ. ಈ ವೇಳೆ ಗ್ರಾಮಸ್ಥರು ಸೋನು ಗೌಡ ಇದ್ದ ಕಾರಿಗೆ ಹಾಕಿದ್ದಾರೆ. ಸೋನು ಗೌಡ ಜೊತೆ ಮಾತನಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎಂದು ಪೊಲೀಸರು ಅಲ್ಲಿಂದ ಹೊರಬರುತ್ತಿದ್ದಂತೆ ಗ್ರಾಮಸ್ಥರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಗುವಿನ ಚಿಕ್ಕಪ್ಪ, ನಾವು ಮಗುವನ್ನು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ ಸಹಾಯ ಮಾಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಳು ಎಂದು ಹೇಳಿದರು.

4. 25 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಮುಡಾ ಆಯುಕ್ತ ಮನ್ಸೂರ್ ಅಲಿ

25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಂಗಳಾ ಕ್ರೀಡಾಂಗಣದ ಬಳಿ ಟಿಡಿಆರ್​ ಕ್ಲಿಯರೆನ್ಸ್ ಮಾಡಲು ಉದ್ಯಮಿ ಗಿರಿಧರ್ ಶೆಟ್ಟಿ ಅವರಿಂದ 25 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮನ್ಸೂರ್ ಅಲಿ ಮತ್ತು ದಲ್ಲಾಳಿ ಸಲೀಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ಚೆಲುವರಾಜ್, ಇನ್ಸ್ಪೆಕ್ಟರ್​ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದ ಅಧಿಕಾರಿಗಳು ದಿಢೀರ್​ ದಾಳಿ ಮಾಡಿ, ಮುಡಾ ಆಯುಕ್ತ ಮನ್ಸೂರ್​ ಅಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

5. ವ್ಯಕ್ತಿಯ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಟಿಬಿ ಕ್ರಾಸ್ ಹೋಟೆಲ್ ಬಳಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಂಧ್ರ ಮೂಲದ 55 ವರ್ಷದ ವೆಂಕಟೇಶಪ್ಪರ ಕತ್ತು ಸೀಳಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಎಸ್‌ಪಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಸಾಲದ ಬಡ್ಡಿ ಹಣಕ್ಕಾಗಿ, ಅಪಮಾನ ಮಾಡಿದ್ದನ್ನು ಸಹಿಸಲಾರದೇ ಮನನೊಂದ ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಕೊತ್ತಗೆರೆಯ ಕೋಡಿ ಹಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 20 ವರ್ಷದ ಕೆ.ಜಿ.ಚೈತ್ರಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿದಂತೆ ಬಡ್ಡಿಗೆ ಹಣ ನೀಡಿದ್ದ ಶಾಂತಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

6.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com