ದೇವೇಗೌಡ ದೂರು ಬೆನ್ನಲ್ಲೇ ಡಿಕೆ ಸುರೇಶ್ ವಿರುದ್ಧ ಕ್ರಮಕ್ಕೆ ಸೂಚನೆ. ಕಾವೇರಿ ನದಿಯಲ್ಲಿ ಮುಳುಗಿ ನಾಲ್ವರು ನೀರುಪಾಲು! - ಈ ದಿನದ ಸುದ್ದಿ ಮುಖ್ಯಾಂಶಗಳು: 26-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ದೇವೇಗೌಡ ದೂರು ಬೆನ್ನಲ್ಲೇ ಡಿಕೆ ಸುರೇಶ್ ವಿರುದ್ಧ ಕ್ರಮಕ್ಕೆ ಸೂಚನೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಮತದಾರರಿಗೆ ಉಚಿತ ಕೊಡುಗೆಗಳನ್ನು ನೀಡಲು ಯೋಜನೆ ರೂಪಿಸುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಲ್ಲಿಸಿದ ದೂರಿನ ಬೆನ್ನಲ್ಲೇ 'ತಕ್ಷಣ ಸೂಕ್ತ ಕ್ರಮ' ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿದೆ. ಈ ಸಂಬಂಧ ರಾಜ್ಯ ಸಿಇಒಗೆ ಬರೆದ ಪತ್ರದಲ್ಲಿ, ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಕಾನೂನುಗಳ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವಂತೆ ಇಸಿ ಚೂಚಿಸಿದೆ. ಅಲ್ಲದೆ ಆದಷ್ಟು ಬೇಗ ಈ ಕುರಿತು ವರದಿ ನೀಡುವಂತೆ ಸೂಚಿಸಿದೆ.

2. ಅಕ್ರಮವಾಗಿ ಕೊಳವೆ ಬಾವಿ ಕೊರೆದ 20ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮ: BWSSB

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಈ ಮಧ್ಯೆ ಅನುಮತಿ ಇಲ್ಲದೆ ಕೊಳವೆ ಬಾವಿಗಳನ್ನು ಕೊರೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ BWSSB ಎಂಜಿನಿಯರ್‌ಗಳಿಗೆ ಸೂಚನೆ ನೀಡಿದೆ. ಬೋರ್‌ವೆಲ್ ಕೊರೆಯುವವರು ಮಂಡಳಿಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಅನುಮತಿ ಪಡೆಯದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಆದರೆ, ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ, 20 ಹೆಚ್ಚು ಮಂದಿ ಆದೇಶವನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಇನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ಮನೋಜ್ ಕುಮಾರ್ ತಲಕಾವೇರಿ ಲೇಔಟ್‌ನ ವಿಭೂತಿಪುರದ ಕೆರೆ ಬಳಿ ಬೋರ್‌ವೆಲ್ ಕೊರೆಸುತ್ತಿದ್ದಾರೆಂದು ಆರೋಪಿಸಲಾಗಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಬಿಡಬ್ಲ್ಯೂಎಸ್‌ಎಸ್‌ಬಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಮಗಾರಿಯನ್ನು ನಿಲ್ಲಿಸಿದರು.

3. ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ

ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿಯಾಗಿದೆ. ಮಂಗನ ಕಾಯಿಲೆಯಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಿಂತ್ರವಳ್ಳಿ ಗ್ರಾಮದ 68 ವರ್ಷದ ರತ್ನ ಎಂಬುವರಿಗೆ ಮಂಗನಕಾಯಿಲೆ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದ್ದರಿಂದ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರತ್ನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಮಂಗನಕಾಯಿಲೆ ಹೆಚ್ಚುತ್ತಿದೆ. ಕೊಪ್ಪ, ಎನ್‌ಆರ್‌ ಪುರ, ಶೃಂಗೇರಿ ತಾಲೂಕಿನಲ್ಲಿ ಕಾಯಿಲೆ ಹೆಚ್ಚುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ 11 ಕೆಎಫ್‌ಡಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

4. ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರುಪಾಲು

ಕಾವೇರಿಯಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿ‌ನ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದ 40 ಮಂದಿ ಪೈಕಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಮೈಸೂರು ಮೂಲದ ನಾಗೇಶ್, ಭರತ್, ಗುರು ಮತ್ತು ಮಹದೇವ್ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದಾಗ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಮುಂದಾದ ಮೂವರು ನೀರಿನಲ್ಲಿ ಮುಳುಗಿದ್ದು ದುರಂತ ಅಂತ್ಯ ಕಂಡಿದ್ದಾರೆ.

5. ಪತ್ನಿಯ ಅಕ್ರಮ: ಗೋಡೆ ಮೇಲೆ ಡೆತ್‍ನೋಟ್ ಬರೆದು ಟೆಕ್ಕಿಯೊಬ್ಬ ಆತ್ಮಹತ್ಯೆ

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಗೋಡೆ ಮೇಲೆ ಡೆತ್‍ನೋಟ್ ಬರೆದು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಟೆಕ್ಕಿಯನ್ನು ಸೈಯ್ಯದ್ ಅಕ್ಮಲ್ ಅನ್ಸರ್ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಾದ ಬಳಿಕ ಪತ್ನಿ ಖತೀಜತುಲ್ ಕುಬ್ರಾ ಅಕ್ರಮ ಸಂಬಂಧ ಇಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದಳು. ಅಷ್ಟೇ ಅಲ್ಲದೆ ವಿಚ್ಛೇದನ ಪಡೆಯಲು 5 ಕೋಟಿ ರೂಪಾಯಿ ಹಣ ನೀಡುವಂತೆ ಖತೀಜತುಲ್ ಕುಬ್ರಾ ಒತ್ತಾಯಿಸುತ್ತಿದ್ದು ಇದೇ ಕಾರಣಕ್ಕೆ ಬೇಸತ್ತು ಸೈಯ್ಯದ್ ಗೋಡೆಯ ಮೇಲೆ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com