ಬಿಜೆಪಿ, ಮೋದಿ, ಸಿಟಿ ರವಿಗೆ ಕಪಾಳಮೋಕ್ಷ ಮಾಡಿ ಎಂದು ಹೇಳಿಲ್ಲ: ಸಚಿವ ಶಿವರಾಜ್ ತಂಗಡಗಿ

ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿಕೆ ನೀಡಿ, ಬಿಜೆಪಿಯವರ ಕಣ್ಣು ಕೆಂಪಗಾಗುವಂತೆ ಮಾಡಿದ್ದ ಸಚಿವ ಶಿವರಾಜ್ ತಂಗಡಗಿ ಅವರು ತಮ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿಕೆ ನೀಡಿ, ಬಿಜೆಪಿಯವರ ಕಣ್ಣು ಕೆಂಪಗಾಗುವಂತೆ ಮಾಡಿದ್ದ ಸಚಿವ ಶಿವರಾಜ್ ತಂಗಡಗಿ ಅವರು ತಮ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸುಳ್ಳು, ಬೂಟಾಟಿಕೆ ಮತ್ತು ಮೋಸ ಮಾಡುವ ಪಕ್ಷ. ಈ ಪಕ್ಷ ನಮ್ಮ ಯುವಕರು ಮತ್ತು ಮಕ್ಕಳ ಹಾದಿ ತಪ್ಪಿಸುತ್ತಿದೆ. ಅವರನ್ನು ತಿದ್ದಲು ಒಬ್ಬ ಅಣ್ಣ, ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಉತ್ತರ ಕರ್ನಾಟಕ ಭಾಷೆಯಲ್ಲಿ ಬುದ್ಧಿ ಹೇಳಿದ್ದೇನೆ. ಹೊಡಿ ಬಡಿ ಸಂಸ್ಕೃತಿ ಬಿಜೆಪಿಯದ್ದೇ ಹೊರತು ನಮ್ಮದಲ್ಲ. ಕಾರಟಗಿಯಲ್ಲಿ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು.

ಸಂಸ್ಕಾರದ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯ ಭಾಷೆಯಲ್ಲಿ ಉತ್ತರ ಕೊಡುವುದೂ ಗೊತ್ತು. ನನಗೆ ನಮ್ಮ ಪಕ್ಷದ ನಾಯಕರು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಯುವಕರಿಗೆ ಬಿಜೆಪಿ ದಾರಿ ತಪ್ಪಿಸುತ್ತಿದ್ದಾರೆ ಎಂದು ನಾನು ಕಳಕಳಿಯ ಮಾತನಾಡಿದ್ದೇನೆ, ಎಷ್ಟು ಸಲ ನೀವು ತ್ರಿಶೂಲ, ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ. ನಿಮ್ಮನ್ನು ಏನು ಮಾಡಬೇಕು? ನಾವು ಸತ್ಯ ಹೇಳಿದರೆ ನಿಮಗೆ ಉರಿಯುತ್ತದೆ, ಮೆಣಸಿನಕಾಯಿ ತಿಂದಂತಾಗುತ್ತಾ? ನಾನು ಮೋದಿಯವರ 10 ವರ್ಷದ ಟ್ರ್ಯಾಕ್ ರೆಕಾರ್ಡ್ ಕೇಳಿದ್ದೇನೆ, ತಪ್ಪೇನಿದೆ? ನಾನು ಮಾತಾಡಿದ್ದರಲ್ಲಿ ಯಾವುದಾದರೂ ಅಶ್ಲೀಲ ಪದಗಳಿತ್ತಾ? ವಿರೋಧ ಪಕ್ಷದವನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕೇ? ಎಂದು ಪ್ರಶ್ನಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ
ಪ್ರಧಾನಿ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ; ಸಚಿವ ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲು

ನಾನು ಯಾವ ಕೆಟ್ಟ ಪದ ಬಳಕೆ ಮಾಡಿದ್ದೇನೆ ಹೇಳಿ? ಉದ್ಯೋಗ‌ ಕೊಡುವುದರ ಬಗ್ಗೆ ಮಾತ್ರ ಬಿಜೆಪಿ ಉತ್ತರ ಕೊಡಲಿ ನೋಡೋಣ. ಮೋದಿ, ಸಿಟಿ ರವಿ, ಬಿಜೆಪಿಯವರಿಗೆ ಕಪಾಳಮೋಕ್ಷ ಮಾಡಿ ಎಂದು ನಾನು ಹೇಳಿಲ್ಲ. ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ನಾಯಕರ ಹೇಳಿಕೆಗಳ ವಿರುದ್ಧ ನಾನು ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ನೂರಾರು ಯುವಕರು ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ. ನಾನು ಮಾಡಿದ ಭಾಷಣ ಇನ್ನೊಮ್ಮೆ ಕೇಳಿ ಉತ್ತರ ಕೊಡಲಿ. ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿಯ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ. ಆ ಹಣ ಬಿಡುಗಡೆ ಮಾಡಿದ್ದಾರಾ? ಇದಕ್ಕೆ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಉತ್ತರ ನೀಡಲಿ. ನಾವು ಉತ್ತರ ಕರ್ನಾಟಕದವರು ನಮಗೆ ಪುಸ್ತಕದ ಕನ್ನಡ ಮಾತನಾಡಲು ಬರುವುದಿಲ್ಲ. ನಮ್ಮ ಭಾಷೆ ಒರಟು. ಬಿಜೆಪಿಯ ಸಂಸ್ಕಾರ ಏನು ಅಂತ ನನಗೂ ಗೊತ್ತಿದೆ, ಅವರಿಂದ ಕಲಿಬೇಕಿಲ್ಲ ಎಂದರು.

2 ಕೋಟಿ ಉದ್ಯೋಗಗಳನ್ನು ಮೋದಿ ಕೊಟ್ಟಿದ್ದರೆ ನಾನೂ ಮೋದಿಗೆ ಜೈ ಎಂದು ಹೇಳುತ್ತಿದ್ದೆ. ಸಂವಿಧಾನದ ಬಗ್ಗೆ ಗೌರವವೇ ಇಲ್ಲದವರು ನಿಮ್ಮ ಬಗ್ಗೆ ಮಾತಾಡಿದ್ದೇನೆ. ಬಸವರಾಜ ಜನ ಪಾಟ ಕಲಿಸ್ತಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಹೌದು ಜನ ಪಾಠ ಕಲಿಸಿದ್ದಕ್ಕೆ ನಿಮಗೆ 65, ನಮಗೆ 135 ಸ್ಥಾನಗಳು ಬಂದಿವೆ ಎಂದರು.

ಉತ್ತರ ಕರ್ನಾಟಕ ಭಾಷೆಯೊಳಗೆ ನಾನು ಭಾಷಣ ಮಾಡಿದ್ದೆ. ಸಹಜವಾದ ಮಾತುಗಳು ಬಂದಿದೆ. ಒಳ್ಳೆಯ ಗೆಳೆತನದೊಳಗೂ ನಾವು ಬೇರೆಬೇರೆ ಭಾಷೆ ಬಳಸುತ್ತೇವೆ. ಜನ ಏನು ಮಾಡುತ್ತಾರೆ ಎನ್ನುವುದು ಜೂನ್4 ಕ್ಕೆ ನಿರ್ಧಾರ ಆಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com