ವಿಜಯ್ ಮಲ್ಯ, ಕ್ಯಾಪ್ಟನ್ ಗೋಪಿನಾಥ್ ವಿರುದ್ಧದ ಎಸ್‌ಎಫ್‌ಐಒ ತನಿಖೆ ರದ್ದು

ಕಿಂಗ್‌ಫಿಶರ್‌ ಮತ್ತು ಡೆಕ್ಕನ್‌ ಏರ್‌ ವಿಲೀನ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗಂಭೀರ ವಂಚನೆ ತನಿಖೆ ಕಚೇರಿಯು (ಎಸ್‌ಎಫ್‌ಐಒ) ದೇಶಭ್ರಷ್ಟ ಉದ್ಯಮಿ ಹಾಗೂ ಕಿಂಗ್‌ಫಿಶರ್‌ ಮಾಜಿ ಮಾಲೀಕ ವಿಜಯ್‌ ಮಲ್ಯ, ಏರ್‌ ಡೆಕ್ಕನ್‌ ಸಂಸ್ಥಾಪಕ ಜಿ ಆರ್‌ ಗೋಪಿನಾಥ್‌ ನಡೆಸುತ್ತಿದ್ದ ತನಿಖೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ
Updated on

ಬೆಂಗಳೂರು: ಕಿಂಗ್‌ಫಿಶರ್‌ ಮತ್ತು ಡೆಕ್ಕನ್‌ ಏರ್‌ ವಿಲೀನ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗಂಭೀರ ವಂಚನೆ ತನಿಖೆ ಕಚೇರಿಯು (ಎಸ್‌ಎಫ್‌ಐಒ) ದೇಶಭ್ರಷ್ಟ ಉದ್ಯಮಿ ಹಾಗೂ ಕಿಂಗ್‌ಫಿಶರ್‌ ಮಾಜಿ ಮಾಲೀಕ ವಿಜಯ್‌ ಮಲ್ಯ, ಏರ್‌ ಡೆಕ್ಕನ್‌ ಸಂಸ್ಥಾಪಕ ಜಿ ಆರ್‌ ಗೋಪಿನಾಥ್‌ ನಡೆಸುತ್ತಿದ್ದ ತನಿಖೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಕಿಂಗ್‌ಫಿಶರ್‌, ಡೆಕ್ಕನ್‌ ಚಾರ್ಟರ್ಸ್‌, ಕ್ಯಾಪ್ಟನ್‌ ಜಿ ಆರ್ ಗೋಪಿನಾಥ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ನ್ಯಾಯಾಲಯದ ಅನುಮತಿಯ ಬಳಿಕ ವಿಲೀನ ಪ್ರಕ್ರಿಯೆ ನಡೆದಿರುವುದರಿಂದ ಎಸ್‌ಎಫ್‌ಐಒ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ನಡೆಸಲಾಗದು. ಅಲ್ಲದೇ, ಯಾವುದೇ ಬಾಧಿತರಾರು ದೂರು ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿಜಯ್ ಮಲ್ಯ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಡಿಕೆ ಶಿವಕುಮಾರ್‌ಗೆ ಹೈಕೋರ್ಟ್ ನಿಂದ ಮಧ್ಯಂತರ ರಿಲೀಫ್!

ಕಂಪೆನಿಗಳ ಕಾಯಿದೆ 1956ರ ಅಡಿ ಆರೋಪಿಗಳು ಅಪರಾಧ ಎಸಗಿದ್ದಾರೆ ಎನ್ನಲಾಗಿದೆ. ಆದರೆ, 2013ರ ಕಂಪೆನಿ ಕಾಯಿದೆ ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ಅಡಿ ಪ್ರಕ್ರಿಯೆ ನಡೆಸಲಾಗುತ್ತಿದೆ. 2013ರ ಕಾಯಿದೆ ಅಡಿ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು 1956ರ ಕಾಯಿದೆ ಅಡಿ ದಾಖಲಾದ ಪ್ರಕರಣವನ್ನು ಒಳಗೊಳ್ಳುವಂತೆ ಪೂರ್ವಾನ್ವಯವಾಗುವಂತೆ ವಿಸ್ತರಿಸಲಾಗದು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಿಕ ಪ್ರಕ್ರಿಯೆ ಜಾರಿ ಮಾಡುವುದಕ್ಕೂ ಮುನ್ನ ವಿಶೇಷ ನ್ಯಾಯಾಲಯವು ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಅಭಿಪ್ರಾಯವನ್ನೂ ರೂಪಿಸಿಲ್ಲ. ಇದು ಸಿಆರ್‌ಪಿಸಿ ಸೆಕ್ಷನ್‌ 204ರ ಉಲ್ಲಂಘನೆಯಾಗಿದೆ.

ಈ ನೆಲೆಯಲ್ಲಿ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ನ್ಯಾಯಿಕ ಪ್ರಕ್ರಿಯೆ ಅಸಿಂಧುವಾಗುತ್ತದೆ. ಮೊದಲಿಗೆ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡದೇ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್‌ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧ. ಕಂಪೆನಿಗಳ ಕಾಯಿದೆ 1956ರ ಅಡಿ ಆರೋಪಕ್ಕೆ 2013ರ ಕಂಪೆನಿ ಕಾಯಿದೆ ಅಡಿ ವಿಚಾರಣೆ ನಡೆಸಲಾಗದು. ಈ ಕ್ರಮವು ಪೂರ್ವಾನ್ವಯ ಅಪರಾಧೀಕರಣದಿಂದ ರಕ್ಷಣೆ ಒದಗಿಸುವ ಸಂವಿಧಾನದ ಅಡಿ ದೊರೆತಿರುವ 20 (1)ನೇ ವಿಧಿಯ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್‌ ಎಸ್‌ಎಫ್‌ಐಒ ಪ್ರಕ್ರಿಯೆ ವಜಾ ಮಾಡುವಾಗ ಹೇಳಿದೆ.

ವಿಜಯ್ ಮಲ್ಯ
ವಿಜಯ್ ಮಲ್ಯ, ನೀರವ್ ಮೋದಿ ಸೇರಿ ಪರಾರಿಯಾದ ಆರ್ಥಿಕ ಅಪರಾಧಿಗಳಿಂದ 15,000 ಕೋಟಿ ರೂ. ವಸೂಲಿ: ಕೇಂದ್ರ

ಕಡಿಮೆ ದರದ ಏರ್‌ ಲೈನ್‌ ಡೆಕ್ಕನ್‌ ಏರ್‌ ಅನ್ನು ವಶಪಡಿಸಿಕೊಳ್ಳುವಾಗ ಕಿಂಗ್‌ಫಿಶರ್‌ ₹1,234 ಕೋಟಿ ನಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಅರ್ಹತಾ ಷರತ್ತುಗಳನ್ನು ಪೂರೈಸದೇ ವಿಲೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಕಿಂಗ್‌ಫಿಶರ್‌ ಮತ್ತು ಇತರರ ವಿರುದ್ಧ ಎಸ್‌ಎಫ್‌ಐಒ ತನಿಖೆ ಆರಂಭಿಸಿತ್ತು.

ಸಂಭಾವ್ಯ ಬಂಡವಾಳ ಲಾಭ ಮತ್ತು ಅಂತಹ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ತಪ್ಪಿಸಲು ಮತ್ತು ಡೆಕ್ಕನ್ ಏರ್‌ನ ಹೂಡಿಕೆದಾರರನ್ನು ವಂಚಿಸಲು ವಿಲೀನ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ಎಸ್‌ಎಫ್‌ಐಒ ಆರೋಪವಾಗಿದೆ.

ಬಂಡವಾಳ ಲಾಭ ತೆರಿಗೆ ತಪ್ಪಿಸಲು ಕಿಂಗ್‌ಫಿಶರ್‌ ಕೃತಕ ವಿಭಜಿತ ಸಂಸ್ಥೆಯ ಮೂಲಕ ಡೆಕ್ಕನ್‌ ಏರ್‌ ವಿಲೀನ ಪ್ರಕ್ರಿಯೆ ನಡೆಸಿದೆ. ವಿಲೀನ ಪ್ರಕ್ರಿಯೆ ನಂತರ ದೊರೆತ ಬ್ರ್ಯಾಂಡ್‌ ಮೌಲ್ಯ ಬಳಸಿ ಹೆಚ್ಚುವರಿ ಹಣಕಾಸಿನ ನೆರವು ಪಡೆದಿದೆ. ಇದನ್ನು ಕಿಂಗ್‌ಫಿಶರ್‌ ಮುಖ್ಯಸ್ಥ ವಿಜಯ್‌ ಮಲ್ಯ ಇತರರು ನಡೆಸಿದ್ದಾರೆ ಎಂಬುದು ಆರೋಪವಾಗಿತ್ತು.

ವಿಜಯ್ ಮಲ್ಯ
ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ವಿಜಯ್ ಮಲ್ಯ ವಿರುದ್ಧ ಕೇಸು ದಾಖಲಿಸಿದ ದೆಹಲಿ ಪೊಲೀಸರು

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ನಿರ್ದೇಶಕ ಮತ್ತು ಯುನೈಟೆಡ್‌ ಬ್ರಿವರೀಸ್‌ ಸಮೂಹದ ಪ್ರಧಾನ ಹಣಕಾಸು ಅಧಿಕಾರಿ ಎ ಕೆ ರವಿ ನೆಡುಂಗಡಿ, ಯುನೈಟೆಡ್‌ ಬ್ರೀವರೀಸ್‌ ಖಜಾಂಚಿ ಎ ಹರೀಶ್‌ ಭಟ್‌, ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಸಿಎಫ್‌ಓ ಎ ರಘುನಾಥನ್‌, ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಂಪೆನಿ ಕಾರ್ಯದರ್ಶಿ ಭರತ್‌ ವೀರರಾಘವನ್‌, ಡೆಕ್ಕನ್‌ ಏರ್‌ ಸಂಸ್ಥಾಪಕ ಕ್ಯಾಪ್ಟರ್‌ ಆರ್‌ ಗೋವಿನಾಥ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಲಿಮಿಟೆಡ್‌ನ ಅಧ್ಯಕ್ಷ ಸುಪ್ರತಿಮ್‌ ಸರ್ಕಾರ್‌ ಮತ್ತಿರರನ್ನು ಆರೋಪಿಗಳನ್ನಾಗಿಸಲಾಗಿತ್ತು.

2018ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಲ್ಯ ಮತ್ತು ಇತರರ ವಿರುದ್ಧ ಬಂಧನ ವಾರೆಂಟ್‌ ಜಾರಿ ಮಾಡಿತ್ತು. ವಾರೆಂಟ್‌ ಮತ್ತು ಎಸ್‌ಎಫ್‌ಐಒ ಪ್ರಕ್ರಿಯೆ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಕದತಟ್ಟಿದ್ದರು. ಇದರಲ್ಲಿ ಮಲ್ಯ ಅರ್ಜಿ ಸಲ್ಲಿಸಿರಲಿಲ್ಲ ಎಂಬುದು ಉಲ್ಲೇಖನೀಯ.

ಡೆಕ್ಕನ್‌ ಚಾರ್ಟರ್ಸ್‌ ಮತ್ತು ಕ್ಯಾಪ್ಟರ್‌ ಆರ್‌ ಗೋಪಿನಾಥ್‌ ಪರವಾಗಿ ಹಿರಿಯ ವಕೀಲ ಉದಯ್‌ ಹೊಳ್ಳ ವಾದಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಮಿತ್‌ ದೇಸಾಯಿ, ಸಿ ವಿ ನಾಗೇಶ್‌, ಸಂಜೋಗ್‌, ಸತೀಶ್‌ ಮಾನೆ ಸಿಂಧೆ, ವಕೀಲರಾದ ಅಮರ್‌ ಕೊರಿಯಾ, ಎಸ್‌ ಮಹೇಶ್‌, ಅಶ್ವೈನ್‌ ಪ್ರಭು, ಎಸ್‌ ಬಿ ಮಠಪತಿ, ಆರ್‌ ನಾಗರಾಜ, ಎಝಡ್‌ಬಿ ಮತ್ತು ಪಾರ್ಟರ್ನ್ಸ್‌ ಕಾನೂನು ಸಂಸ್ಥೆ ಮತ್ತು ವಕೀಲ ಅರ್ಜುನ್‌ ರಾವ್‌ ವಾದಿಸಿದ್ದರು. ಎಸ್‌ಎಫ್‌ಐಒ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಮತ್ತು ವಕೀಲ ಮಧುಕರ್‌ ದೇಶಪಾಂಡೆ ವಾದಿಸಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com