ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಸಂಕಷ್ಟ: ವಿಚಾರಣೆಗೆ ಹಾಜರಾಗದಿದ್ದರೆ ಬಂಧನ; ಜಿ. ಪರಮೇಶ್ವರ್ ವಾರ್ನಿಂಗ್
ಕಲಬುರಗಿ: ಪೆನ್‌ಡ್ರೈವ್ ಪಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಹೊಳೆನರಸೀಪುರದಲ್ಲಿ ನಗರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಕೇಸ್ ತನಿಖೆಯನ್ನ ಎಸ್‌ಐಟಿ ತೀವ್ರಗೊಳಿಸಿದೆ.
ಈ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ A1 ಆರೋಪಿಯಾಗಿದ್ದಾರೆ. ಹೀಗಾಗಿ ಇಂದು ರೇವಣ್ಣ ಹೊಳೆನರಸೀಪುರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಎರಡು ದಿನ ಸಮಯ ಕೇಳೋ ಸಾಧ್ಯತೆ ಇದೆ. ಆದರೆ ಈ ನಡುವೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು ರೇವಣ್ಣ ಗೆ ಬಂಧನದ ಎಚ್ಚರಿಕೆ ನೀಡಿದ್ದಾರೆ.
ಪ್ರಜ್ವಲ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತಗೆದುಕೊಂಡಿದೆ, ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡೋದೇ ಇಲ್ಲ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ಲುಕ್ಔಟ್ ನೋಟಿಸ್ ನೀಡಲಾಗಿದೆ, ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ. ಇಂಥಾ ಪ್ರಕರಣಗಳಲ್ಲಿ ಕಾಲಾವಕಾಶ ಕೊಡಲು ಆಗೋದಿಲ್ಲ, ಹೀಗಾಗಿ ಅರೆಸ್ಟ್ ಮಾಡಲು SIT ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಇವತ್ತು ಹಾಜರಾಗದೇ ಇದ್ರೆ ರೇವಣ್ಣ ಅವರನ್ನು ಬಂಧಿಸಲೇಬೇಕಾಗುತ್ತೆ, ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ.
ಈಗಾಗಲೇ ಇಬ್ಬರು ಮಹಿಳೆಯರು ದೂರು ದಾಖಲು ಮಾಡಿದ್ದಾರೆ ಎಂದಿದ್ದಾರೆ. ಸಾವಿರಾರು ಮಹಿಳೆಯರು ವಿಡಿಯೋದಲ್ಲಿದ್ದಾರೆ, ಹೀಗಾಗಿ ಇದು ಗಂಭೀರ ಪ್ರಕರಣ, ಆ ಹೆಣ್ಣು ಮಕ್ಕಳ ಕುಟುಂಬದ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ