ಪ್ರಜ್ವಲ್ ರೇವಣ್ಣಗೆ ಸಂಕಷ್ಟ: ಅತ್ಯಾಚಾರ ಪ್ರಕರಣ ದಾಖಲು. ಸಂತ್ರಸ್ತೆ ನಾಪತ್ತೆ; ರೇವಣ್ಣ ವಿರುದ್ಧ FIR, ಬೆಂಗಳೂರಿಗೆ ಮಳೆಯ ಸಿಂಚನ! ಈ ದಿನದ ಸುದ್ದಿ ಮುಖ್ಯಾಂಶಗಳು 03-05-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಪ್ರಜ್ವಲ್ ರೇವಣ್ಣಗೆ ಸಂಕಷ್ಟ: ಅತ್ಯಾಚಾರ ಪ್ರಕರಣ ದಾಖಲು

ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ಪ್ರಜ್ವಲ್ ರೇವಣ್ಣ ತಮ್ಮ ಮೇಲೆ 3 ವರ್ಷ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ನಮ್ಮ ದೈಹಿಕ ಸಂಪರ್ಕದ ಸನ್ನಿವೇಶಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅವುಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಪದೇ ಪದೇ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು 40 ವರ್ಷದ ಮಹಿಳೆ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 376 (2)(N), 354 (A)(1), 354(B), 354(c) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿಭಾಗ 66(E)ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ. ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ SIT ಅಧಿಕಾರಿಗಳು ಬೆಂಗಳೂರು ಮತ್ತು ಹಾಸನದ ಮನೆ ಮತ್ತು ಫಾರ್ಮ್ ಹೌಸ್ ಗಳಲ್ಲಿ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ.

2. ಸಂತ್ರಸ್ತೆ ನಾಪತ್ತೆ; ಎಚ್ ಡಿ ರೇವಣ್ಣ ವಿರುದ್ಧ ದೂರು ದಾಖಲು

ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದಿಂದ ತಾವೂ ಸಿಲುಕಿರುವ ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ. ವೈರಲ್ ಆಗಿರುವ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೊದಲ್ಲಿ ನನ್ನ ತಾಯಿ ಫೋಟೋ ಸಹ ಇದೆ. ಇದಾದ ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದು ಹೆಚ್ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ, ಬಂಧನದ ಭೀತಿ ಎದುರಿಸುತ್ತಿದ್ದ ಹೆಚ್ ಡಿ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು. ಈ ವೇಳೆ ಎಸ್ಐಟಿ ಪರವಾಗಿ ವಾದ ಮಂಡಿಸಿದ SPP ಜಗದೀಶ್ ಅವರು, 376 ಅಲ್ಲದೆ ಬೇರೆ ಯಾವುದೇ ಜಾಮೀನು ರಹಿತ ಸೆಕ್ಷನ್ ಹಾಕುವುದಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದರು.

3. ಯುವತಿಯೊಂದಿಗೆ ಯುವಕ ಪರಾರಿ: ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ

ಹಾವೇರಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾದನೆಂಬ ಕಾರಣಕ್ಕೇ ಆತನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಧಾರುಣ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪುರ ಗ್ರಾಮದ ನಿವಾಸಿ ಹನುಮವ್ವಳ ಮಗ ಮಂಜುನಾಥ ಅನ್ಯ ಜಾತಿಯ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರಾದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಎಂಬುವವರು ಹನುಮವ್ವಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಮಹಿಳೆ ಹನುಮವ್ವಳನ್ನ ತಾಲೂಕು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲಾಗಿದೆ.

4. ಬೆಂಗಳೂರಿಗೆ ಮಳೆಯ ಸಿಂಚನ

ಸುಮಾರು 159 ದಿನಗಳ ನಂತರ ಬೆಂಗಳೂರಿನಲ್ಲಿ ಮಳೆಯ ಸಿಂಚನವಾಗಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ವಿಧಾನಸೌಧ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಸಂಪಂಗಿರಾಮನಗರ, ಮಲ್ಲೇಶ್ವರಂ, ಜಯನಗರ, ಶಿವಾಜಿನಗರ, ಕೊತ್ತನೂರು, ಪ್ಯಾಲೇಸ್‌ ಗುಟ್ಟಹಳ್ಳಿ, ಹೊರಮಾವು, ಕೆಆರ್ ಪುರಂ, ನಾಗವರ, ಮಹಾಲಕ್ಷ್ಮಿ ಬಡಾವಣೆ, ರಾಮಮೂರ್ತಿನಗರ, ಸದಾಶಿವನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಗಾಳಿ, ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಿದೆ. ನಗರದಲ್ಲಿ ಸುಮಾರು 17.2 ಮಿಮೀ ಮಳೆಯಾಗಿದ್ದು, ಪರಿಣಾಮ ನಗರದಲ್ಲಿ ಹೆಚ್ಚಾಗಿದ್ದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ. ಸಾಮಾನ್ಯವಾಗಿ ಈ ಹಿಂದಿನ ವಾರಗಳಲ್ಲಿ ಬೆಂಗಳೂರಿನ ತಾಪಮಾನ 38 ಡಿಗ್ರಿಯಷ್ಟಿತ್ತು. ಇಂದು ಮಳೆಯ ಬಳಿಕ ನಗರದಲ್ಲಿನ ತಾಪಮಾನ 23.4 ಡಿಗ್ರಿಗೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com