ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ

‘ಚಿಕ್ಕೋಡಿಯಲ್ಲಿ ಬಿಜೆಪಿಯದ್ದೇ ಮೇಲುಗೈ’: ಅಣ್ಣಾಸಾಹೇಬ ಜೊಲ್ಲೆ (ಸಂದರ್ಶನ)

Published on

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಯುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿದಿದ್ದಾರೆ.

ದಶಕಗಳಿಂದ ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಉತ್ಸುಕವಾಗಿದ್ದು, ತನ್ನ ಭದ್ರಕೋಟೆಯನ್ನು ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಬಾರಿಯ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಚಿಕ್ಕೋಡಿ ಕೂಡ ಒಂದಾಗಿದೆ.

ಅಣ್ಣಾಸಾಹೇಬ ಜೊಲ್ಲೆ ಅವರು ಜನಪ್ರಿಯ ರಾಜಕಾರಣಿಯಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಾರಣ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಹಿಡಿತವನ್ನು ಹೊಂದಿದ್ದಾರೆ. ಅವರ ಪತ್ನಿ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ನಿಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಚಿಕ್ಕೋಡಿಯಲ್ಲಿ ಇವರೂ ಜನಪ್ರಿಯ ರಾಜಕಾರಣಿಯಾರಾಗಿದ್ದಾರೆ.

ಚುನಾವಣಾ ಪ್ರಚಾರದ ನಡುವೆ ಅಣ್ಣಾಸಾಹೇಬ್ ಜೊಲ್ಲೆ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಂತಿವೆ...

Q

ನಿಮ್ಮಷ್ಟೇ ಜನಪ್ರಿಯ ವ್ಯಕ್ತಿ ನಿಮ್ಮ ಪ್ರತಿಸ್ಪರ್ಧಿಯಾಗಿದ್ದಾರೆ. ಅವರನ್ನು ಹೇಗೆ ನೋಡುತ್ತೀರಿ?

A

ದೊಡ್ಡ ಅಂತರದಿಂದ ಗೆಲುವು ಸಿಗುವ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆ ನಿಕಟವಾಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ. ನನ್ನ ಪ್ರತಿಸ್ಪರ್ಧಿ ಯಾರೇ ಆಗಲಿ, ಚಿಕ್ಕೋಡಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೊಲ್ಲೆ ಕುಟುಂಬ ಮೇಲುಗೈ ಸಾಧಿಸಿರುವುದರಿಂದ ಯಾವುದೇ ವಿರೋಧವಿಲ್ಲದೆ ಗೆಲುವು ಸಾಧಿಸುವುದು ಖಚಿತ.

Q

ಜನರು ಬಿಜೆಪಿಗೆ ಮತ ಹಾಕಬೇಕು ಮತ್ತು ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ನೀವು ಏಕೆ ಭಾವಿಸುತ್ತೀರಿ?

A

ಕಳೆದ 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರಗಳು ಕೈಗೊಂಡ ಕೆಲಸಗಳನ್ನು ನರೇಂದ್ರ ಮೋದಿ ಸರ್ಕಾರಗಳ 10 ವರ್ಷಗಳ ಆಡಳಿತಾವಧಿಗೆ ಹೋಲಿಸಲಾಗುವುದಿಲ್ಲ. ದೇಶವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಮೋದಿಯವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಯಾರೂ ಕನಸು ಕಾಣದ ಹಲವಾರು ಪ್ರಮುಖ ಕೆಲಸಗಳನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯವೈಖರಿ ಮತ್ತು ಮೋದಿಯವರ ಕ್ರಿಯಾಶೀಲ ನಾಯಕತ್ವವನ್ನು ಗಮನಿಸಿದರೆ ಜನರು ಖಂಡಿತವಾಗಿಯೂ ನಮ್ಮ ಪಕ್ಷವನ್ನು ಮತ್ತೆ ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ.

Q

ನಿಮ್ಮ ಮುಂದಿರುವ ಪ್ರಮುಖ ಸಮಸ್ಯೆಗಳು ಯಾವುವು?

A

ಈ ಚುನಾವಣೆಯಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ. ಚಿಕ್ಕೋಡಿಯ ಎಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಜನತೆಯ ಬೃಹತ್ ಬೆಂಬಲದೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಮೋದಿ ಅಲೆ ನನಗೆ ಸಹಾಯ ಮಾಡಲಿದೆ. ಅಲ್ಲದೆ, ಕಳೆದ ಐದು ವರ್ಷಗಳಲ್ಲಿ ಸಂಸದನಾಗಿ ಚಿಕ್ಕೋಡಿಯಲ್ಲಿ ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ನಾನು ಕೈಗೊಂಡಿರುವ ಕೆಲಸಗಳು ನನಗೆ ಪುಷ್ಟಿ ನೀಡುತ್ತವೆ.

Q

ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಮೋದಿ ಅಲೆಯ ಮೇಲೆ ಅವಲಂಬಿತವಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ?

A

ಸಹಜವಾಗಿಯೇ ದೇಶದಲ್ಲಿ ಮೋದಿ ಅಲೆ ಇದೆ. ಕಾಂಗ್ರೆಸ್‌ನಲ್ಲಿ ಅಂತಹ ಅಲೆ ಇದೆಯೇ ಹೇಳಿ. ಚಿಕ್ಕೋಡಿಯಲ್ಲಿ ಇದುವರೆಗೆ ಕಾಂಗ್ರೆಸ್ ನಾಯಕರು ಏನೂ ಮಾಡಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ನಾನು ಇಲ್ಲಿ ಕೈಗೆತ್ತಿಕೊಂಡ ಕೆಲಸಗಳನ್ನು ಅವರು ಗುರುತಿಸುತ್ತಾರೆಯೇ? ಚುನಾವಣೆ ಸಮೀಪಿಸುತ್ತಿರುವ ಕಾರಣ, ಕಾಂಗ್ರೆಸ್ ನಾಯಕರು ಕ್ರೆಡಿಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ಬಿಜೆಪಿಯನ್ನು ವಿರೋಧಿಸುತ್ತಲೇ ಇರುತ್ತಾರೆ.

Q

ಬಿಜೆಪಿಯ ಹಲವು ಪ್ರಮುಖ ನಾಯಕರು ಅಭ್ಯರ್ಥಿಯಾಗಿ ನಿಮ್ಮ ನಾಮಪತ್ರವನ್ನು ವಿರೋಧಿಸಿ ಪ್ರಚಾರದಿಂದ ದೂರ ಉಳಿದಿದ್ದರು. ಇದು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ?

A

ಈ ಹಿಂದೆ ಪಕ್ಷದ ಕೆಲ ಮುಖಂಡರು ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದರು. ಆದರೆ ಅವರೆಲ್ಲ ಈಗ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಚಿಕ್ಕೋಡಿಯ ಎಲ್ಲ ಮುಖಂಡರು ಕೈ ಜೋಡಿಸಿ ನನಗೆ ಬೆಂಬಲ ನೀಡುತ್ತಿದ್ದಾರೆ. ಮತ್ತೊಂದೆಡೆ, ಚಿಕ್ಕೋಡಿ ಬಿಜೆಪಿಯ ಸ್ಥಿತಿಗಿಂತ ಕಾಂಗ್ರೆಸ್‌ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅನೇಕ ನಾಯಕರು ವಿವಿಧ ವಿಷಯಗಳಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ.

Q

ರಾಜ್ಯ ವಿಧಾನಸಭೆ ಚುನಾವಣೆಯ ಗೆಲುವಿನಿಂದ ಕಾಂಗ್ರೆಸ್ ಪಾಳಯದಲ್ಲಿ ಹುರುಪು ಹೆಚ್ಚಾಗಿದೆ ಎಂದು ಅನಿಸುವುದಿಲ್ಲವೇ?

A

ರಾಜ್ಯದ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳಿಗಿಂತ ಭಿನ್ನವಾಗಿವೆ. ವಿಧಾನಸಭೆ ಚುನಾವಣೆಗಳು ರಾಜ್ಯದ ಸಮಸ್ಯೆಗಳ ಆಧಾರದ ಮೇಲೆ ನಡೆಯುತ್ತವೆ, ಆದರೆ, ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಸಮಸ್ಯೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ರಾಜ್ಯದ ಸಮಸ್ಯೆಗಳು 50 ಪ್ರತಿಶತದವರೆಗೆ ಕೆಲಸ ಮಾಡಬಹುದಷ್ಟೆ. ಅದಕ್ಕಿಂತ ಹೆಚ್ಚಿಲ್ಲ.

Q

ಗೆದ್ದರೆ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

A

ನಾನು ಕೃಷಿ ಹಿನ್ನೆಲೆಯಿಂದ ಬಂದಿರುವುದರಿಂದ, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಹಲವಾರು ಪ್ರಮುಖ ಕ್ರಮಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನ ಹರಿಸಲು ಉತ್ಸುಕನಾಗಿದ್ದೇನೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com