ಅಪಹರಣ ಪ್ರಕರಣ: HD ರೇವಣ್ಣ 4 ದಿನ SIT ಕಸ್ಟಡಿಗೆ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್. ಕಾಂಗ್ರೆಸ್ ಗೆ ಮತ ಹಾಕಲ್ಲ ಎಂದವನಿಗೆ ಥಳಿತ - ಈ ದಿನದ ಸುದ್ದಿ ಮುಖ್ಯಾಂಶಗಳು 05-05-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮನವಿ ಬೆನ್ನಲ್ಲೇ ಸಿಬಿಐ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು, ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪತ್ತೆಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸಲು SIT ರಾಜ್ಯ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದರು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು, ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಆರೋಪಯಾಗಿದ್ದ ರೇವಣ್ಣನನ್ನು ನಾವು ಬಂಧಿಸಿದ್ದೇವೆ. ಬ್ರಿಜ್ ಭೂಷಣ್, ಉನ್ನಾವೋ, ಹತ್ರಾಸ್ ಅತ್ಯಾಚಾರಿಗಳನ್ನು ಬಂಧಿಸುವ ಧಮ್ಮು, ತಾಕತ್ತು ನಿಮಗಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ನೆರವಿಗಾಗಿ ಎಸ್‌ಐಟಿ ಅಧಿಕಾರಿಗಳು 6360938947 ಸಹಾಯವಾಣಿ ಆರಂಭಿಸಿದ್ದಾರೆ.

2. ಎಚ್ ಡಿ ರೇವಣ್ಣ ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್.‌ಡಿ. ರೇವಣ್ಣ ಅವರು ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು ನನ್ನ ವಿರುದ್ಧವಾಗಿ ನಡೆಯುತ್ತಿರುವ ರಾಜಕೀಯ ಷಡ್ಯಂತ್ರ ಇದು ಎಂದು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಗೆಂದು ಎಚ್‌.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೋರಿಂಗ್‌ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ, ನನ್ನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ. 40 ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಇದೊಂದು ದುರದ್ದೇಶಪೂರ್ವಕ ಬಂಧನವಾಗಿದೆ. ಯಾವುದೇ ಸಾಕ್ಷಿಗಳು ಸಹ ಎಸ್ಐಟಿ ಬಳಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಎಚ್ ಡಿ ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ರೇವಣ್ಣರನ್ನು 4 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ.

3. SC\ST ಅನುದಾನ ಮುಸ್ಲಿಂರ ಪಾಲು: ಜೆಪಿ ನಡ್ಡಾ, ಬಿವೈ ವಿಜಯೇಂದ್ರ ವಿರುದ್ಧ ಎಫ್ಐಆರ್

SC\ST ಅನುದಾನ ಮುಸ್ಲಿಂರ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಜಾಹೀರಾತು ನೀಡಿದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅಮಿತ್ ಮಾಳವಿಯಾ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್ ದಾಖಲಾಗಿದೆ. ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಈ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಅಲ್ಲದೆ ಚುನಾವಣಾ ನೀತಿ ಸಂಹಿತೆ ಹಾಗೂ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್​ ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಮೂವರು ನಾಯಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

4. ಕಾಂಗ್ರೆಸ್ ಗೆ ಮತ ಹಾಕಲ್ಲ ಎಂದವನಿಗೆ ಥಳಿತ

ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ, ಬಿಜೆಪಿಗೆ ಹಾಕುತ್ತೇನೆ ಎಂದು ಹೇಳಿದ ಬಿಜೆಪಿ ಮುಖಂಡನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದ ಬಿಜೆಪಿ ಮುಖಂಡ ದ್ಯಾಮಣ್ಣ ಬಾಲನಗೌಡರ್ ಮನೆಗೆ ಕಳೆದ ರಾತ್ರಿ ಬಂದ ಕಾಂಗ್ರೆಸ್‌ ಕಾರ್ಯಕರ್ತರಾದ ಗವಿಸಿದ್ದ, ಬಾಳಪ್ಪ, ನೀಲಪ್ಪ, ಗಂಗಣ್ಣ ಎಂಬುವವರು ದ್ಯಾಮಣ್ಣನಿಗೆ ಕಾಂಗ್ರೆಸ್ ಗೆ ಮತ ಹಾಕುವಂತೆ ಹೇಳಿದ್ದಾರೆ. ಇದಕ್ಕೆ ಇಲ್ಲಿ ನಾನು ಬಿಜೆಪಿಗೆ ಮತ ಹಾಕುತ್ತೇನೆ ಎಂದು ದ್ಯಾಮಣ್ಣ ಹೇಳಿದ್ದಾರೆ. ಇದರಿಂದ ಸಿಟ್ಟಾದ ಕೈ ಕಾರ್ಯಕರ್ತರು ದ್ಯಾಮಣ್ಣನನ್ನು ರಸ್ತೆಗೆಳೆದು ತಂದು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ದ್ಯಾಮಣ್ಣನ ಕೈ-ಕಾಲು ಮುರಿದಿದ್ದಾರೆ. ಗಾಯಾಳನ್ನು ದ್ಯಾಮಣ್ಣನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

5. ಮಗುವನ್ನು ನಾಲೆಗೆ ಎಸೆದ ತಾಯಿ

ಗಂಡನ ಮೇಲಿದ್ದ ಕೋಪಕ್ಕೆ ಆರು ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಹೆತ್ತ ತಾಯಿಯೇ ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ. ರವಿಕುಮಾರ್ ಹಾಗೂ ಸಾವಿತ್ರಿ ನಡುವೆ ಆಗಾಗ ಜಗಳವಾಗುತ್ತಿತ್ತು. ಮೂಗನಾಗಿದ್ದ ಮಗನ ಮೇಲೆ ಪ್ರತಿ ಬಾರಿ ಕುಡಿದು ಬಂದು ಜಗಳವಾಡುತ್ತಿದ್ದ ರವಿಕುಮಾರ್, ಮಗ ಸಾಯಲಿ ಎಂದು ಬೈಯುತ್ತಿದ್ದನು. ನಿನ್ನೆ ರಾತ್ರಿಯೂ ಜಗಳ ನಡೆದು ಕೋಪದಲ್ಲಿ ತಾಯಿ ಸಾವಿತ್ರಿಯೇ‌ ಮಗನನ್ನು ನಾಲೆಗೆ ಎಸೆದಿದ್ದಳು. ಈ ಸಂಬಂಧ ಆರೋಪಿಗಳಾದ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com